Ashwaveega News 24×7 ಫೆಬ್ರವರಿ 15 -2026 : ರಾಜ್ಯದಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಮುಂಜಾನೆ ಇಂದೇ ದೇವಸ್ಥಾನಗಳಲ್ಲಿ ಭಕ್ತರ ಸಾಲು ಕಾಣಿಸಿಕೊಂಡಿದ್ದು, ಎಲ್ಲೆಡೆ ಶಿವನಾಮಸ್ಮರಣೆ ಮೊಳಗುತ್ತಿದೆ.
ರಾಜಧಾನಿ ಬೆಂಗಳೂರಿನ ಕಾಡು ಮಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ಆರಂಭಗೊಂಡಿವೆ. ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಾವಿರಾರು ಭಕ್ತರು ದರ್ಶನಕ್ಕಾಗಿ ಹರಿದುಬರುತ್ತಿದ್ದಾರೆ.
ಅದೇ ರೀತಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ, ಮುರೂಡೇಶ್ವರ ದೇವಸ್ಥಾನ, ನಂಜುಂಡೇಶ್ವರ ದೇವಸ್ಥಾನ ಸೇರಿದಂತೆ ರಾಜ್ಯದ ಪ್ರಮುಖ ಶಿವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಗಳು ನಡೆಯುತ್ತಿವೆ.
ಹೂವು, ಬಿಲ್ವಪತ್ರೆ ಹಾಗೂ ಹಣ್ಣುಗಳ ಖರೀದಿ ಜೋರಾಗಿದ್ದು, ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ ಕಂಡುಬಂದಿದೆ. ಶಿವರಾತ್ರಿ ಹಿನ್ನೆಲೆ ಹೂವುಗಳ ಬೆಲೆ ದ್ವಿಗುಣವಾಗಿದ್ದು, ವ್ಯಾಪಾರಿಗಳು ಉತ್ತಮ ವಹಿವಾಟಿನ ನಿರೀಕ್ಷೆಯಲ್ಲಿದ್ದಾರೆ.
ಭಕ್ತರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಗೆ ಪೊಲೀಸರು ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದಾರೆ. ಹಲವು ದೇವಸ್ಥಾನಗಳಲ್ಲಿ ರಾತ್ರಿ ಜಾಗರಣೆ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.
ಮಹಾಶಿವರಾತ್ರಿ ಅಂಗವಾಗಿ ರಾಜ್ಯದೆಲ್ಲೆಡೆ ಭಕ್ತಿ ಸಂಭ್ರಮ ಮನೆಮಾಡಿದ್ದು, ಶಿವನ ಆರಾಧನೆಯಲ್ಲಿ ಜನತೆ ತಲ್ಲೀನರಾಗಿದ್ದಾರೆ.
