Ashwaveega News 24×7 ಫೆಬ್ರವರಿ 15 -2026 – ಕಲಬುರಗಿ : ರಾಜ್ಯ ರಾಜಕೀಯದಲ್ಲಿ ಸಿಎಂ–ಡಿಸಿಎಂ ನಡುವಿನ ಭಿನ್ನಾಭಿಪ್ರಾಯಗಳ ಚರ್ಚೆ ನಡುವೆ ಸಿರಿಗೆರೆ ಶ್ರೀಗಳ ಎಂಟ್ರಿ ಹೊಸ ಕುತೂಹಲ ಕೆರಳಿಸಿದೆ. ಭೀಮಣ್ಣ ಖಂಡ್ರೆ ನುಡಿ, ನಮನ ಕಾರ್ಯಕ್ರಮದ ವೇದಿಕೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷರ ನಡುವಿನ ಮಾತುಕತೆ ಗಮನ ಸೆಳೆದಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿರಿಗೆರೆ ಶಿವಾಚಾರ್ಯ ಸ್ವಾಮೀಜಿ, ನಾಯಕತ್ವ ವಿಚಾರವಾಗಿ ಸಮತೋಲನದ ಮಾತುಗಳನ್ನು ಆಡಿದರು. “ಸಿಎಂ ಮತ್ತು ಡಿಸಿಎಂ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಇಬ್ಬರೂ ಒಂದೇ ವೇದಿಕೆಯಲ್ಲಿ ಭಾಗವಹಿಸಿ ವೈಮನಸ್ಸು ತೊರೆದು ನಡೆದುಕೊಳ್ಳುವುದು ಉತ್ತಮ ಬೆಳವಣಿಗೆ. ಇಂಥಾ ನಡೆ ಬೇರೆಯವರಿಗೆ ಮಾದರಿ ಆಗಬೇಕು” ಎಂದು ಹೇಳಿದರು.
ವೇದಿಕೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಕ್ಷಣ ಗಮನ ಸೆಳೆದಿತು. ಈ ವೇಳೆ ಸಿರಿಗೆರೆ ಸ್ವಾಮೀಜಿ ಖರ್ಗೆ ಅವರ ಬಳಿ ಡಿಕೆ ಪರ ಮನವಿ ಮಾಡಿದರೇ ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಖರ್ಗೆ ಅವರು ಡಿಕೆಶಿಗೆ ಭರವಸೆ ನೀಡಿದಂತೆ ಕಾಣಿಸಿಕೊಂಡಿದ್ದು, ಇದರಿಂದ ಡಿಸಿಎಂ ಸಂತಸಗೊಂಡರು ಎನ್ನಲಾಗಿದೆ. ವೇದಿಕೆಯಲ್ಲಿ ಸಿಎಂ ಭಾಷಣದ ವೇಳೆ ಸ್ವಾಮೀಜಿ, ಡಿಕೆ ಮತ್ತು ಖರ್ಗೆ ನಡುವೆ ನಡೆದ ಮಾತುಕತೆ ಹಲವು ಅರ್ಥಗಳನ್ನು ಹುಟ್ಟುಹಾಕಿದೆ.
ಡಿಸಿಎಂ ನಡೆದುಕೊಳ್ಳುತ್ತಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿ, “ಪಕ್ಷದ ಒಳಹೊರಗಿನ ಸವಾಲುಗಳ ನಡುವೆಯೂ ಶಾಂತವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದ್ದಾರೆ . ಖರ್ಗೆ ಅವರ ಸಮ್ಮುಖದಲ್ಲೇ ಡಿಕೆಶಿ ಬಗ್ಗೆ ಪ್ರಶಂಸಾಪೂರ್ವಕವಾಗಿ ಮಾತನಾಡಿರುವುದು ರಾಜಕೀಯ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಒಟ್ಟಿನಲ್ಲಿ, ನಾಯಕತ್ವ ವಿಚಾರದಲ್ಲಿ ನಡೆಯುತ್ತಿರುವ ಪವರ್ ಫೈಟ್ ನಡುವೆ ಸಿರಿಗೆರೆ ಶ್ರೀಗಳ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
