Ashwaveega News 24×7 ಫೆಬ್ರವರಿ 16 -2026 : ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ . ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು ಈ ಬಾರಿ ಕೇವಲ ಪ್ರತಿಭಟನೆ ಮಾತ್ರವಲ್ಲ, ಬಸ್ ಸಂಚಾರವೇ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
38 ತಿಂಗಳ ಹಿಂಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೌಕರರು ಹೋರಾಟ ತೀವ್ರಗೊಳಿಸಿದ್ದಾರೆ. ಫೆಬ್ರವರಿ 19ರಂದು “ಬೆಂಗಳೂರು ಚಲೋ” ಕರೆ ನೀಡಿರುವ ಸಾರಿಗೆ ಸಂಘಟನೆಗಳು, ಫೆಬ್ರವರಿ 20ರಂದು ರಾಜ್ಯಾದ್ಯಂತ ಬಸ್ ಸಂಚಾರ ಬಂದ್ ಮಾಡುವ ನಿರ್ಧಾರ ಕೈಗೊಂಡಿವೆ.
KSRTC, BMTC, NWKRTC ಹಾಗೂ KKRTC ನಿಗಮಗಳ ಸಿಬ್ಬಂದಿಗೆ ಈಗಾಗಲೇ ಬಂದ್ ಕುರಿತ ಮಾಹಿತಿ ನೀಡಲಾಗಿದೆ ..
ಫೆಬ್ರವರಿ 19ರಂದು ಬೆಂಗಳೂರುನಲ್ಲಿ ಮಹಾ ಪ್ರತಿಭಟನೆ ನಡೆಸಿ, ಬೇಡಿಕೆ ಈಡೇರಿಸದಿದ್ದರೆ ಮರುದಿನವೇ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಸರ್ಕಾರಿ ಬಸ್ಗಳನ್ನು ನಂಬಿಕೊಂಡಿದ್ದರೆ ಎಚ್ಚರಿಕೆಯಿಂದಿರಬೇಕು. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ದೂರ ಪ್ರಯಾಣಿಕರಿಗೆ ಇದರಿಂದ ಭಾರೀ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಒಟ್ಟಾರೆ , ಸರ್ಕಾರ ಹಾಗೂ ಸಾರಿಗೆ ನೌಕರರ ನಡುವೆ ನಡೆಯುತ್ತಿರುವ ಈ ಹಗ್ಗಜಗ್ಗಾಟ ಯಾವತ್ತಿಗೆ ಅಂತ್ಯ ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
