Ashwaveega News 24×7 ಫೆಬ್ರವರಿ 16 -2026 : ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ Colors Kannada ನಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ LLB ಧಾರಾವಾಹಿಯಲ್ಲಿ ಕಥೆಯ ದಿಕ್ಕೇ ಬದಲಿಸುವ ಮಹಾ ತಿರುವು ಎದುರಾಗಿದೆ. ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯ ಶಾಲಿ ವಕೀಲೆಯಾಗಿ ಮೆರೆದಿದ್ದ ಭಾರ್ಗವಿಯ ಬದುಕು ಇದೀಗ ಭಾವನಾತ್ಮಕ ಸಿಡಿಲಿಗೆ ಗುರಿಯಾಗಿದೆ.
ಪ್ರಭಾವಿ ವಕೀಲ ಜೆಪಿ ಪಾಟೀಲ್ ಅವರ ಒತ್ತಡದಿಂದ ವಕೀಲಿಕೆ ತ್ಯಜಿಸಿದ್ದ ತಂದೆ ರವೀಂದ್ರ ಭಟ್ಕಳ್ ಅವರನ್ನು ಮತ್ತೆ ಕೋರ್ಟ್ ಮೆಟ್ಟಿಲೇರಿಸುವ ಸಂಕಲ್ಪ ಮಾಡಿದ್ದ ಭಾರ್ಗವಿ, ತನ್ನ ಗುರಿಯನ್ನು ಸಾಧಿಸಿದ್ದಳು. ಆದರೆ ಆ ಸಾಧನೆಯ ಸಂಭ್ರಮ ಹಂಚಿಕೊಳ್ಳುವ ಮುನ್ನವೇ ವಿಧಿ ಕ್ರೂರಿಯಾಗಿ ಅಪ್ಪನನ್ನು ಕಸಿದುಕೊಂಡಿದೆ. ಭೀಕರ ರಸ್ತೆ ಅಪಘಾತದಲ್ಲಿ ರವೀಂದ್ರ ಭಟ್ಕಳ್ ಅವರ ಅಕಾಲಿಕ ನಿಧನ ಕುಟುಂಬವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಇದು ನಿಜವಾಗಿಯೂ ಅಪಘಾತವೇ ? ಅಥವಾ ಭಾರ್ಗವಿಯ ವೃತ್ತಿ ವೈಷಮ್ಯದಿಂದ ಹುಟ್ಟಿದ ಸಂಚೋ ? ಎಂಬ ಅನುಮಾನಗಳು ಇದೀಗ ಕಥೆಗೆ ಮತ್ತಷ್ಟು ರಹಸ್ಯ ಮೆರಗು ನೀಡಿವೆ . ತಂದೆಯ ಸಾವಿನಿಂದ ಕುಗ್ಗಿದ ತಾಯಿ, ಇದೇ ಲಾಯರ್ ವೃತ್ತಿಯೇ ತಮ್ಮ ಕುಟುಂಬವನ್ನು ಹಾಳುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಭಾರ್ಗವಿಗೆ ವಕೀಲಿಕೆ ತ್ಯಜಿಸುವಂತೆ ತಾಕೀತು ಮಾಡುತ್ತಾರೆ.
ತಾಯಿಯ ನೋವಿಗೆ ಸ್ಪಂದಿಸಿದ ಭಾರ್ಗವಿ, ಅಪ್ಪನ ಚಿತೆಯ ಮುಂದೆ ಭೀಷ್ಮ ಪ್ರತಿಜ್ಞೆ ಮಾಡುತ್ತಾಳೆ — “ಅಮ್ಮ ಮತ್ತೆ ಹೇಳುವವರೆಗೆ ವಕೀಲರ ಕೋಟ್ ಧರಿಸುವುದಿಲ್ಲ” ಎಂದು ಶಪಥ ಮಾಡುತ್ತಾಳೆ. ಈ ನಿರ್ಧಾರದಿಂದ ಭಾರ್ಗವಿ ತನ್ನ ವೃತ್ತಿಜೀವನಕ್ಕೆ ತಾತ್ಕಾಲಿಕ ವಿದಾಯ ಹೇಳಿರುವುದು ಸ್ಪಷ್ಟವಾಗಿದೆ.

ಈ ಮಹತ್ವದ ತಿರುವು ಕಥೆಗೆ ಅಂತ್ಯವಲ್ಲ, ಹೊಸ ಅಧ್ಯಾಯದ ಆರಂಭ ಎಂಬ ಸುಳಿವು ನೀಡುತ್ತಿದೆ. ಭಾವನೆ, ಸಾಮಾಜಿಕ ಕಳಕಳಿ ಮತ್ತು ಕೌಟುಂಬಿಕ ಸೆಂಟಿಮೆಂಟ್ಗಳ ಸಂಯೋಜನೆಯೊಂದಿಗೆ ವೀಕ್ಷಕರ ಮನ ಗೆದ್ದಿರುವ ಈ ಧಾರಾವಾಹಿ ಇದೀಗ ಮತ್ತಷ್ಟು ರೋಚಕ ಘಟ್ಟಕ್ಕೆ ಕಾಲಿಟ್ಟಿದೆ.
ಭಾರ್ಗವಿ LLB ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ Colors Kannada ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಭಾರ್ಗವಿಯ ಈ ಅನಿರೀಕ್ಷಿತ ಪಯಣಕ್ಕೆ ಸಾಕ್ಷಿಯಾಗಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
