Ashwaveega News 24×7 ಫೆಬ್ರವರಿ 18 -2026 ನವದೆಹಲಿ : ಭಾರತೀಯ ಸಮಾಜದಲ್ಲಿ ಪಿತೃಪ್ರಧಾನ ಚಿಂತನೆ ಇನ್ನೂ ಗಟ್ಟಿಯಾಗಿ ನೆಲೆಯೂರಿದೆ ಎಂದು ಬಾಲಿವುಡ್ ಹಿರಿಯ ನಟಿ Neena Gupta ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ಮಾತನಾಡಿದ ಅವರು, “ಭಾರತ ಬದಲಾಗಿದೆ ಎಂದು ನಾವು ಹೇಳಿಕೊಂಡರೂ, ಕೆಲವು ವಿಷಯಗಳಲ್ಲಿ ಮನೋಭಾವ ಬದಲಾಗಿಲ್ಲ” ಎಂದು ಹೇಳಿದ್ದಾರೆ.
“ಇಂದಿಗೂ ಹಲವರು ಮದುವೆಗಾಗಿ ಹುಡುಕುವಾಗ ‘ವರ್ಜಿನ್ ವೈಫ್’ ಬೇಕೆಂದು ನಿರೀಕ್ಷಿಸುತ್ತಾರೆ. ಯುವತಿ ಕನ್ಯೆಯೋ ಇಲ್ಲವೋ ಎಂದು ಪರಿಶೀಲಿಸುವ ಮನೋಭಾವ ಸಮಾಜದಲ್ಲಿ ಇನ್ನೂ ಇದೆ . ಇದು ಹಳೆಯ ಕಥೆಯಲ್ಲ, ಇಂದಿಗೂ ನಡೆಯುತ್ತಿರುವ ವಾಸ್ತವ” ಎಂದು ಅವರು ಹೇಳಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯುತ್ತಿದ್ದರೂ, ಮನೆಮಾತಿನಲ್ಲಿ ಪಿತೃಪ್ರಧಾನ ವ್ಯವಸ್ಥೆ ಮುಂದುವರಿದಿದೆ ಎಂದು ನೀನಾ ಗುಪ್ತಾ ವಿಷಾದ ವ್ಯಕ್ತಪಡಿಸಿದರು. “ಇಂದಿಗೂ ಕೆಲ ಕಡೆ ಮಹಿಳೆಯರು ತಲೆಯ ಮೇಲೆ ಸೆರಗು ಹಾಕಿಕೊಳ್ಳಬೇಕು, ಮಾವನ ಪಾದಗಳನ್ನು ಮುಟ್ಟಬೇಕು ಎನ್ನುವ ನಿರೀಕ್ಷೆ ಇದೆ. ಇಂತಹ ನಡೆಗಳು ಸಮಾಜದಲ್ಲಿ ಇವೆ …
ಮಹಿಳೆಯ ಮದುವೆ ಮುಂಚಿನ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನಿಸುವುದು ಸರಿಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು . “ಪುರುಷರ ವೈಯಕ್ತಿಕ ಜೀವನವನ್ನು ಯಾರು ಪ್ರಶ್ನಿಸುತ್ತಾರೆ ? ಆದರೆ ಮಹಿಳೆಯರ ವಿಷಯದಲ್ಲಿ ಮಾತ್ರ ವಿಚಾರಣೆ ನಡೆಯುತ್ತದೆ,” ಎಂದು ಕಿಡಿಕಾರಿದರು.
ಹೌದು ಸಮಾಜದಲ್ಲಿ ಬದಲಾವಣೆ ಒಂದು ದಿನದಲ್ಲಿ ಸಾಧ್ಯವಿಲ್ಲ. ಸಮಯ ಬೇಕು. ಆದರೆ ಚರ್ಚೆಗಳು ನಡೆಯಬೇಕು, ಮನೋಭಾವ ಬದಲಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ತಮ್ಮ ವೈಯಕ್ತಿಕ ಜೀವನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎರಡನೇ ಮದುವೆ ಬಗ್ಗೆ ಮಾತನಾಡಿದರು. ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳು ವೈಯಕ್ತಿಕವಾಗಿದ್ದು, ಅವುಗಳನ್ನು ಸಮಾಜದ ಕಣ್ಣಿನಿಂದ ನೋಡುವುದು ಸರಿಯಲ್ಲ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.
ನೀನಾ ಗುಪ್ತಾ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆ ಕುರಿತಂತೆ ಹೊಸ ಸಂವಾದಕ್ಕೆ ದಾರಿ ಮಾಡಿಕೊಟ್ಟಿದೆ.
