Ashwaveega News 24×7 ಫೆಬ್ರವರಿ 18 -2026 ಬೆಂಗಳೂರು : ಸಿಲಿಕಾನ್ ಸಿಟಿ ಮತ್ತೆ ಕಸದ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೇ ಎಂಬ ಆತಂಕ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ವ್ಯಾಪ್ತಿಯ Bellahalli ಯಲ್ಲಿರುವ ಡಂಪಿಂಗ್ ವಾರ್ಡಿ ಗೆ ಕಸ ವಿಲೇವಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಸ ಹೊತ್ತ ಲಾರಿಗಳನ್ನು ಡಂಪಿಂಗ್ ವಾರ್ಡಿ ಗೆ ಒಳ ಬಿಡಲಾಗುತ್ತಿಲ್ಲ. ಪರಿಣಾಮವಾಗಿ ಸುಮಾರು 180ಕ್ಕೂ ಹೆಚ್ಚು ಕಸದ ಲಾರಿಗಳು ಬೆಳ್ಳಳ್ಳಿಯಲ್ಲೇ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ.
ಗ್ರಾಮಸ್ಥರ ಆರೋಪದಂತೆ, ಕಳೆದ ಎರಡು ವರ್ಷಗಳಿಂದ ವಿಲೇಜ್ ಡೆವಲಪ್ಮೆಂಟ್ಗೆ ಸಂಬಂಧಿಸಿದ ಹಣ ಬಿಡುಗಡೆಯಾಗಿಲ್ಲ. ಘನತ್ಯಾಜ್ಯ ನಿರ್ವಹಣಾ ಘಟಕದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರೂ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಂಪಿಂಗ್ ವಾರ್ಡಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಅಲ್ಲದೆ, ಭಾರೀ ವಾಹನ ಸಂಚಾರದಿಂದ ಗ್ರಾಮ ರಸ್ತೆಗಳು ಹಾಳಾಗುತ್ತಿವೆ . ಈ ಸಮಸ್ಯೆಗಳ ನಿರ್ವಹಣೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಣ ಬಿಡುಗಡೆ ಮಾಡುವವರೆಗೆ ಕಸ ಡಂಪ್ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಮತ್ತೆ ಕಸದ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ .
ನಗರದ ಕಸ ನಿರ್ವಹಣೆಯಲ್ಲಿ ವ್ಯತ್ಯಯ ಉಂಟಾದರೆ, ಬೀದಿ ಬೀದಿಗಳಲ್ಲಿ ಕಸದ ಗುಡ್ಡೆಗಳು ಕಟ್ಟಿ “ಗಾರ್ಬೆಜ್ ಸಿಟಿ” ಎಂಬ ಕಳಂಕ ಮತ್ತೆ ಎದುರಾಗುವ ಆತಂಕ ನಾಗರಿಕರಲ್ಲಿ ಮೂಡಿದೆ . ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
