Ashwaveega News 24×7 ಫೆಬ್ರವರಿ 18 -2026 : ಕಳೆದ ಕೆಲ ದಿನಗಳಿಂದ ನಿರಂತರ ಇಳಿಕೆಯನ್ನು ಕಂಡಿದ್ದ ಬಂಗಾರ ಮತ್ತು ಬೆಳ್ಳಿ ದರಗಳಲ್ಲಿ ಇಂದು ಸ್ವಲ್ಪ ಮಟ್ಟಿನ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಸಿಲ್ವರ್ ದರದಲ್ಲಿ ಬೆಳಗ್ಗೆಯಿಂದಲೇ ಭಾರೀ ಜಿಗಿತ ಕಂಡುಬಂದಿದೆ .
1 ಕೆ.ಜಿ. ಬೆಳ್ಳಿ ಬೆಲೆ 2 ಲಕ್ಷ 45 ಸಾವಿರ ರೂಪಾಯಿಗೆ ತಲುಪಿದೆ. ಬೆಳಗ್ಗೆಯಿಂದಲೇ ಸುಮಾರು 7 ಸಾವಿರ ರೂಪಾಯಿ ಏರಿಕೆಯಾಗಿದೆ ಎಂದು ವರದಿಯಾಗಿದೆ. ನಿರಂತರ ಇಳಿಕೆಯಿಂದ ಗ್ರಾಹಕರು ಖರೀದಿಗೆ ಕಾಯುತ್ತಿದ್ದ ಸಂದರ್ಭದಲ್ಲಿ ಈ ಏರಿಕೆ ಅಚ್ಚರಿಯನ್ನುಂಟು ಮಾಡಿದೆ.
ಸಿಲ್ವರ್ ಮಾತ್ರವಲ್ಲ, ಗೋಲ್ಡ್ ದರದಲ್ಲೂ ಜಿಗಿತ ಕಂಡುಬಂದಿದೆ. 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 56 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಬೆಳಗ್ಗೆಯಿಂದಲೇ ಸುಮಾರು 1 ಸಾವಿರ ರೂಪಾಯಿ ಏರಿಕೆ ದಾಖಲಾಗಿದೆ. ಮಾರುಕಟ್ಟೆ ಕ್ಲೋಸಿಂಗ್ ವೇಳೆಗೆ ಬಂಗಾರ ಹಾಗೂ ಬೆಳ್ಳಿ ದರದಲ್ಲಿ ಇನ್ನಷ್ಟು ಏರಿಕೆ ಕಂಡುಬಂದಿದೆ.
ಗೋಲ್ಡ್ ಹಾಗೂ ಸಿಲ್ವರ್ ದರದ ಏರಿಕೆ – ಇಳಿಕೆ ಆಟ ಗ್ರಾಹಕರಲ್ಲಿ ಗೊಂದಲ ಉಂಟುಮಾಡಿದೆ. ಯಾವ ಸಮಯದಲ್ಲಿ ಖರೀದಿ ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಮತ್ತೊಂದೆಡೆ, ಹೂಡಿಕೆದಾರರಲ್ಲಿ ಆತಂಕ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ದರದ ದಿಕ್ಕು ಹೇಗಿರಲಿದೆ ಎಂಬುದರ ಬಗ್ಗೆ ಕಾದು ನೋಡುವ ಸ್ಥಿತಿ ನಿರ್ಮಾಣವಾಗಿದೆ.
ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳು, ಡಾಲರ್ ಮೌಲ್ಯ, ಅಂತರರಾಷ್ಟ್ರೀಯ ಬೇಡಿಕೆ – ಪೂರೈಕೆ ಪರಿಸ್ಥಿತಿಗಳು ದರ ಏರಿಳಿತಕ್ಕೆ ಪ್ರಮುಖ ಕಾರಣವಾಗಿರುತ್ತದೆ .
