Ashwaveega News 24×7 ಫೆಬ್ರವರಿ 18 -2026 : ಹುಟ್ಟುಹಬ್ಬದ ಸಂಭ್ರಮವೇ ಯುವಕನಿಗೆ ಸಾವಿನ ದಿನವಾಗಿ ಪರಿಣಮಿಸಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬರ್ತ್ಡೇ ಆಚರಣೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 24 ವರ್ಷದ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರಿನ ಐವರ ಕಂಡಪುರ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಓವರ್ ಸ್ಪೀಡ್ನಲ್ಲಿ ಬರುತ್ತಿದ್ದ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಪವನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತ ಪವನ್ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ಗುಡ್ಡದಹಳ್ಳಿ ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹುಟ್ಟುಹಬ್ಬದ ಆಚರಣೆ ಬಳಿಕ ಸ್ನೇಹಿತರನ್ನು ಭೇಟಿ ಮಾಡಿ ಮನೆಗೆ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ .
ಘಟನೆ ಸಂಬಂಧ ಸೋಲದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೂಡ್ಸ್ ವಾಹನ ಚಾಲಕನ ವಿರುದ್ಧ ತನಿಖೆ ಮುಂದುವರಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂದೆಡೆ ಕುಟುಂಬದಲ್ಲಿ ಹುಟ್ಟುಹಬ್ಬದ ಸಂಭ್ರಮ, ಮತ್ತೊಂದೆಡೆ ಅಕಾಲಿಕ ಮರಣದ ನೋವು — ಈ ದುರ್ಘಟನೆ ಕುಟುಂಬಸ್ಥರನ್ನಷ್ಟೇ ಅಲ್ಲ, ಸ್ಥಳೀಯರನ್ನೂ ಶೋಕ ಸಾಗರದಲ್ಲಿ ಮುಳುಗಿಸಿದೆ.
