Ashwaveega News 24×7 ಫೆಬ್ರವರಿ 23 – 2026 ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಗರಿಗೆದರಿದೆ. ಮುಖ್ಯಮಂತ್ರಿ Siddaramaiah ನೀಡಿದ ಇತ್ತೀಚಿನ ಹೇಳಿಕೆಗಳು ಉಪ ಮುಖ್ಯಮಂತ್ರಿ D. K. Shivakumar ಅವರಿಗೆ “ಪಟ್ಟಾಭಿಷೇಕ”ಎನ್ನುವ ಪ್ರಶ್ನೆ ಹುಟ್ಟುಹಾಕಿವೆ.
ಬಜೆಟ್ ಅಧಿವೇಶನದ ನಂತರ ರಾಜ್ಯದಲ್ಲಿ ಪವರ್ ಶೇರಿಂಗ್ ಸೂತ್ರ ಜಾರಿಗೆ ಬರಬಹುದೇ ಎಂಬ ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ವಿಚಾರವಾಗಿ ಸಂಧಾನ ಸಭೆಗಳು ನಡೆದಿರುವ ಮಾಹಿತಿ ಲಭ್ಯವಾಗಿದ್ದು, ಡಿಕೆಶಿ ಹೆಸರು ಮತ್ತೆ ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದೆ ಅಂತೆ .
ಒಕ್ಕಲಿಗ ಸಮುದಾಯದ ಪ್ರತಿನಿಧಿತ್ವದ ಪ್ರಶ್ನೆಯೂ ರಾಜಕೀಯವಾಗಿ ತೀವ್ರ ಚರ್ಚೆವಾಗಿದೆ. ಜೆಡಿಎಸ್ ನಾಯಕ H. D. Kumaraswamy ಅವರಿಗೆ ಕೌಂಟರ್ ನೀಡುವ ತಂತ್ರದ ಭಾಗವಾಗಿ ಕಾಂಗ್ರೆಸ್ ಒಕ್ಕಲಿಗ ಸಮುದಾಯಕ್ಕೆ ಅವಕಾಶ ನೀಡಬಹುದೇ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ. “ಒಕ್ಕಲಿಗರು ಸಿಎಂ ಆಗುವುದಾದರೆ ಅದು ಕಾಂಗ್ರೆಸ್ನಿಂದ ಮಾತ್ರ” ಎನ್ನುವ ಸಂದೇಶವನ್ನು ಸಾರುವ ಪ್ರಯತ್ನವೇ ಇದಾಗಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.
ಸಿದ್ದರಾಮಯ್ಯ ಅವರು “ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ, ಎಲ್ಲವೂ ಹೈಕಮಾಂಡ್ ನಿರ್ಧಾರ” ಎಂದು ಹೇಳಿರುವುದು ಹಲವು ಅರ್ಥಗಳನ್ನು ಹುಟ್ಟುಹಾಕಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆಯೇ ಎಂಬ ರಾಜಕೀಯ ಚರ್ಚೆ ಜೋರಾಗಿದೆ.
ಇದೇ ವೇಳೆ ಡಿಕೆಶಿ ಶಿಬಿರವೂ ಮೌನ ತಂತ್ರ ಅನುಸರಿಸುತ್ತಿದ್ದು, “ಹೈಕಮಾಂಡ್ ಸೂಚನೆ ಬಂದಾಗ ಯಾವುದೇ ಹೊಣೆಗಾರಿಕೆಗೆ ಸಿದ್ಧ” ಎನ್ನುವ ಸಂದೇಶವನ್ನು ಪರೋಕ್ಷವಾಗಿ ನೀಡುತ್ತಿದೆ. ಯಾವುದೇ ಕ್ಷಣದಲ್ಲಿ ದೆಹಲಿಯಿಂದ ಬುಲಾವ್ ಬರಬಹುದೆಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ನಾಯಕತ್ವದ ಪ್ರಶ್ನೆಯಲ್ಲಿ ಅಂತಿಮ ನಿರ್ಧಾರ ಪಕ್ಷದ ವರಿಷ್ಠರ ಕೈಯಲ್ಲಿದ್ದು, ಮುಂದಿನ ಕೆಲವು ವಾರಗಳು ಕರ್ನಾಟಕ ರಾಜಕೀಯದ ದೃಷ್ಟಿಯಿಂದ ನಿರ್ಣಾಯಕವಾಗಲಿವೆ. ಡಿಕೆಶಿ “ಕುರ್ಚಿ” ಹತ್ತುವಾರಾ ? ಅಥವಾ ಸಿದ್ದರಾಮಯ್ಯವೇ ಮುಂದುವರೆಯುವಾರಾ ? ರಾಜಕೀಯ ವಲಯ ಕಾತರದಿಂದ ಕಾಯುತ್ತಿದೆ.
