Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಗಳಲ್ಲಿ ಕಲ್ಲಂಗಡಿ ಹಣ್ಣಿಗೆ ಭಾರೀ ಬೇಡಿಕೆ ಕಾಣಿಸಿಕೊಂಡಿದೆ. ತಂಪು, ರುಚಿ ಮತ್ತು ದೇಹದ ನೀರಿನ ಕೊರತೆಯನ್ನು ನೀಗಿಸುವ ಗುಣಗಳಿಂದಾಗಿ ಕಲ್ಲಂಗಡಿ ಬೇಸಿಗೆಯ ಪ್ರಮುಖ ಹಣ್ಣಾಗಿ ಪರಿಗಣಿಸಲಾಗಿದೆ. ಆದರೆ ಈ ಬಾರಿ ಕಲ್ಲಂಗಡಿ ಹಣ್ಣಿನ ಬಗ್ಗೆ ಆತಂಕಕಾರಿ ಮಾಹಿತಿ ಹೊರಬಂದಿದೆ.
ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕೆಲ ಕಲ್ಲಂಗಡಿ ಹಣ್ಣುಗಳಲ್ಲಿ ಕೃತಕ ಬಣ್ಣ ಬಳಸಿರುವ ಸಾಧ್ಯತೆ ಇದೆ . ವಿಶೇಷವಾಗಿ ಎರಿಥ್ರೋಸಿನ್ (Erythrosine) ಎಂಬ ಕೃತಕ ಕೆಂಪು ಬಣ್ಣ ಹಾಗೂ ನೈಟ್ರೇಟ್ಗಳಂತಹ ರಾಸಾಯನಿಕಗಳನ್ನು ಬಳಸಿರುವ ಅನುಮಾನ ಇದೆ. ಹಣ್ಣಿನ ಒಳಭಾಗ ಹೆಚ್ಚು ಕೆಂಪಾಗಿರಲು ಮತ್ತು ತಾಜಾ ಕಾಣಿಸಿಕೊಳ್ಳಲು ಇಂತಹ ಕೆಮಿಕಲ್ಗಳನ್ನು ಬಳಕೆ ಮಾಡುವ ಸಾಧ್ಯತೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಕೃತಕ ಬಣ್ಣ ಹಾಗೂ ನೈಟ್ರೇಟ್ಗಳು ದೇಹಕ್ಕೆ ಗಂಭೀರ ಹಾನಿ ಉಂಟುಮಾಡಬಹುದು. ಅತಿಯಾಗಿ ಸೇವಿಸಿದರೆ ಹೊಟ್ಟೆ ನೋವು, ವಾಂತಿ, ಅಜೀರ್ಣ, ತಲೆನೋವು ಸೇರಿದಂತೆ ದೀರ್ಘಕಾಲಿಕವಾಗಿ ಕಿಡ್ನಿ ಮತ್ತು ಲಿವರ್ ಸಮಸ್ಯೆಗಳಿಗೂ ಕಾರಣವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಇಂತಹ ಕೆಮಿಕಲ್ ಕಲ್ಲಂಗಡಿ ಸೇವಿಸಿದರೆ ಹೆಚ್ಚಿನ ಅಪಾಯ ಎದುರಾಗಬಹುದು.
ಈ ಹಿನ್ನೆಲೆದಲ್ಲಿ, ಮಾರ್ಚ್ ತಿಂಗಳಲ್ಲಿ ಕಲ್ಲಂಗಡಿ ಹಣ್ಣುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲು ಸರ್ಕಾರ ಯೋಜನೆ ರೂಪಿಸಿದೆ. ಕೇವಲ ಕಲ್ಲಂಗಡಿ ಮಾತ್ರವಲ್ಲ, ಬೇಸಿಗೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಐಸ್ಕ್ರೀಂ ಹಾಗೂ ಹಣ್ಣು ಜ್ಯೂಸ್ಗಳ ಮಾದರಿಗಳನ್ನೂ ಪರೀಕ್ಷೆಗೆ ಒಳಪಡಿಸುವ ಪ್ಲಾನ್ ಇದೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾರುಕಟ್ಟೆಗಳಲ್ಲಿ ತಪಾಸಣೆ ಹೆಚ್ಚಿಸಲು ಮುಂದಾಗಿದ್ದಾರೆ.
ಗ್ರಾಹಕರು ಹಣ್ಣು ಖರೀದಿಸುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಕಲ್ಲಂಗಡಿ ಕತ್ತರಿಸಿದಾಗ ಅತಿಯಾಗಿ ಕಂಗೊಳಿಸುವ ಕೆಂಪು ಬಣ್ಣ ಕಂಡುಬಂದರೆ, ಕೈಗೆ ಬಣ್ಣ ಅಂಟಿದರೆ ಅಥವಾ ಅಸಹಜ ವಾಸನೆ ಕಂಡುಬಂದರೆ ಖರೀದಿ ಮಾಡದೇ ದೂರವಿರುವುದು ಉತ್ತಮ. ಸಾಧ್ಯವಾದಷ್ಟು ವಿಶ್ವಾಸಾರ್ಹ ವ್ಯಾಪಾರಿಗಳಿಂದ ಮಾತ್ರ ಹಣ್ಣುಗಳನ್ನು ಖರೀದಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ತಂಪು ನೀಡುವ ಹಣ್ಣುಗಳೇ ಆರೋಗ್ಯಕ್ಕೆ ಅಪಾಯವಾಗದಂತೆ, ಸರ್ಕಾರದ ಕ್ರಮಗಳ ಜೊತೆಗೆ ಸಾರ್ವಜನಿಕರ ಜಾಗೃತಿಯೂ ಅಗತ್ಯವಾಗಿದೆ.
