Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆಗಳು ಗರಿಗೆದರಿರುವ ನಡುವೆಯೇ , ಕಾಂಗ್ರೆಸ್ನ ಹಿರಿಯ ನಾಯಕರು ತಮ್ಮ ಹಕ್ಕು ಒತ್ತಾಯಿಸಲು ಮುಂದಾಗಿದ್ದಾರೆ. ಫಸ್ಟ್ ಟೈಂ ಶಾಸಕರಿಗೆ ಅವಕಾಶ ಸಿಗಬಹುದು ಎನ್ನುವ ಮಾತುಗಳ ನಡುವೆ, ಸೀನಿಯರ್ ಶಾಸಕರ ಲಾಬಿ ರಾಜಕಾರಣ ಶುರುವಾಗಿದೆ.
ಬೆಳಗಾವಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಶಾಸಕ Raju Kage ಅವರು ಸಚಿವ ಸ್ಥಾನ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ .“ನಂಗೂ ಬೇಕು ಮಂತ್ರಿ ಪವರ್.. ನಾನು ಇಲ್ಲಿ ಸೀನಿಯರ್. ಹೊಸಬರಿಗೆ ಸಚಿವ ಸ್ಥಾನ ಕೊಡುವುದು ತಪ್ಪಲ್ಲ. ಆದರೆ ನಮಗೂ ಅವಕಾಶ ಬೇಕು,” ಎಂದು ಅವರು ಹೇಳಿದ್ದಾರೆ .
ಹೈಕಮಾಂಡ್ಗೆ ಕೆಲವರು ಪತ್ರ ಬರೆದಿದ್ದಾರೆ ಎಂಬ ಚರ್ಚೆಗಳ ನಡುವೆಯೇ , ಕಾಗೆ ಅವರು ಕೂಡ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ . “ಸಚಿವ ಸ್ಥಾನ ಕೊಟ್ಟರೆ ತಗೋಳ್ತೇನೆ.. ನನ್ನ ಟ್ಯಾಲೆಂಟ್ ನೋಡ್ರಿ . ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ,” ಎಂದು ಹೇಳಿದ್ದಾರೆ .
ರಾಜ್ಯದಲ್ಲಿ ಕಾಂಗ್ರೆಸ್ಗೆ 136 ಶಾಸಕರು ಇದ್ದಾರೆ. ಎಲ್ಲರನ್ನೂ ಸಚಿವರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡ ಅವರು, “136 ಜನ ಇದ್ದೇವೆ.. ಎಲ್ಲರನ್ನೂ ಸಚಿವರ ಮಾಡೋಕೆ ಆಗಲ್ಲ. ಆದರೆ ಸಚಿವ ಸ್ಥಾನ ಬೇಡ ಅನ್ನೋದು ನಾನು ಒಬ್ಬನೇ ತಿಳಿದುಕೊಳ್ಳಿ,” ಎಂದು ಹೇಳಿದರು .
ಸಚಿವ ಸ್ಥಾನ ಸಿಗದಿದ್ದರೆ ಏನು ಮಾಡ್ತೀರಾ ? ಎಂಬ ಪ್ರಶ್ನೆಗೆ, “ಒಂದ್ವೇಳೆ ಸಚಿವ ಸ್ಥಾನ ಕೊಡದಿದ್ದರೆ ಮನೆಯಲ್ಲಿ ಇರ್ತೇನೆ,” ಎಂದು ಉತ್ತರಿಸಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾದರು . ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ ಕಾಗೆ , “ ಕಾಗವಾಡ ಕ್ಷೇತ್ರಕ್ಕೆ ನಾನೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು .
