Ashwaveega News 24×7 ಫೆಬ್ರವರಿ 24 – 2026 : ಶಿರಸಿ ತಾಲ್ಲೂಕು ಸುತ್ತ ಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ, ವಿಚಾರಗಳ ಕುರಿತು ನಿರ್ದೇಶಕ ಕಾರ್ತೀಕ್ ಭಟ್ ಕಥಾಹಂದರ ಹೆಣೆದಿರುವ ಚಿತ್ರ ದೇವಸಸ್ಯ. ಅಪರೂಪದ ಗಿಡವೊಂದರ ಸುತ್ತ ಈ ಚಿತ್ರಕಥೆ ಸಾಗಲಿದೆ .
ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಅನಂತ ಫಿಲಂಸ್ ಅಡಿ ಅನಂತಮೂರ್ತಿ ಎಂ.ಹೆಗಡೆ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಾರ್ತೀಕ್ ಭಟ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

1995ರ ಕಾಲಘಟ್ಟದಲ್ಲಿ ನಡೆಯುವ ನಮ್ಮ ಮಣ್ಣಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಊರಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದ ಸಿದ್ಧಿ ಸಮುದಾಯದ ಯುವಕ ಸೆಲ್ವಿನ್ ದೇಸಾಯಿ ಈ ಚಿತ್ರದ ಪ್ರಮುಖ ಪಾತ್ರಧಾರಿ. ನಿರ್ದೇಶಕರು ಈತನಿಗೆ 2 ವರ್ಷಗಳ ತರಬೇತಿ ನೀಡಿ ಬಣ್ಣ ಹಚ್ಚಿಸಿದ್ದಾರೆ. ರಂಗಪ್ರತಿಭೆ ಆಹಾನ್ಗೌಡ ಮತ್ತು ಬಿಂಬಿಕಾ ಜೆ.ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಅಲ್ಲದೆ, 150ಕ್ಕೂ ಹೆಚ್ಚು ಸಿದ್ಧಿ ಕಲಾವಿದರು ನಟಿಸಿರುವುದು ಈ ಚಿತ್ರದ ವಿಶೇಷ. ಈ ಚಿತ್ರಕ್ಕಾಗಿ 1995ರ ಕಾಲಘಟ್ಟದ ಹಳ್ಳಿಯೊಂದರ ಸೆಟ್ ಹಾಕಿ ಅಲ್ಲಿ, 93 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ನಿರ್ದೇಶಕ ಕಾರ್ತೀಕ್ ಭಟ್ ಮಾತನಾಡಿ ಮೊದಲಿಂದಲೂ ನನಗೆ ಸಿನಿಮಾ ಎಂದರೆ ಹುಚ್ಚು. ಕೆಲ ಚಲನಚಿತ್ರ, ಸೀರಿಯಲ್ಗಳಿಗೆ ಬರಹಗಾರನಾಗಿ ಕೆಲಸ ಮಾಡಿ, ಮೊದಕಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದೇನೆ.
ಸಿರ್ಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ, ಇದು ಕಥೆಯಲ್ಲ, ಹೊಸ ಜಗತ್ತು, ಉತ್ತರ ಕನ್ನಡದಲ್ಲಿ ಮಲೆನಾಡು, ಬಯಲುಸೀಮೆ ಎರಡೂ ಇದೆ. ಅದರಲ್ಲಿ ಸಾಕಷ್ಟು ಕಥೆಗಳಿದ್ದು, ಅದರಲ್ಲಿ ಇದೂ ಒಂದು, 46 ರಿಂದ 47 ವರ್ಷನ್ ಕಥೆ ಬರೆದು ಫೈನಲ್ ಮಾಡಿದ್ದೇವೆ,ನಿರ್ಮಾಪಕರಿಗೆ ಕಥೆ ಹೇಳಿದಾಗ ಅವರು ತುಂಬಾ ಇಷ್ಟಪಟ್ಟು ಚಿತ್ರ ನಿರ್ಮಿಸಿದ್ದಾರೆ. ಎರಡು ಊರುಗಳ ಮಧ್ಯೆ ನಡೆಯುವ ಕಥೆಯಿದು. ಸಿದ್ದಿ ಹುಡುಗನ ಪಾತ್ರವನ್ನು ಸೆಲ್ವಿನ್ ದೇಸಾಯಿ ಮಾಡಿದ್ದಾರೆ ಎಂದರು.

ನಾಯಕಿ ಬಿಂಬಿಕಾ ಮಾತನಾಡಿ ಈ ಚಿತ್ರದಲ್ಲಿ ನಾನು ಮಾತಂಗಿ ಎಂಬ ಸಿದ್ದಿ ಜನಾಂಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇದು ನನ್ನ 5 ನೇ ಚಿತ್ರ ಎಂದರು. ಯಶವಂತ್ ಅವರ ಛಾಯಾಗ್ರಹಣ , ಹರಿ ಅಜಯ್ ಅವರ ಸಂಗೀತ ಸಂಯೋಜನೆ, ಕೆಜಿಎಫ್. ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಅದ್ಭುತ ಪ್ರಾಕೃತಿಕ ಸೊಬಗಲ್ಲಿ ರಾಜೇಶ್ ಕೃಷ್ಣನ್, ಆಂಥೋನಿದಾಸ್, ಇಂದು ನಾಗರಾಜ್, ರವಿ ಮೂರೂರು ಹಾಡಿರುವ ವಿಭಿನ್ನ ಶೈಲಿಯ 7 ಹಾಡುಗಳನ್ನ ಸೆರೆಹಿಡಿಯಲಾಗಿದೆ.
