Ashwaveega News 24×7 ಫೆಬ್ರವರಿ 25 – 2026 ಬೆಂಗಳೂರು : ರಾಜ್ಯ ರಾಜಕೀಯದಲ್ಲಿ “ದಲಿತ ಸಿಎಂ” ಚರ್ಚೆ ಮತ್ತೆ ಜೋರಾಗಿರುವ ಹೊತ್ತಿನಲ್ಲಿ, ಸಚಿವ G. Parameshwara ಅವರ ಹೇಳಿಕೆ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ . ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಅನುಭವ ಮತ್ತು ಸಾಮರ್ಥ್ಯವನ್ನು ಉಲ್ಲೇಖಿಸಿ , ಪರೋಕ್ಷವಾಗಿ ನಾಯಕತ್ವದ ವಿಚಾರದಲ್ಲಿ “ನನ್ನನ್ನೂ ಪರಿಗಣಿಸಿ” ಎಂಬ ಸಂದೇಶ ನೀಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ .
“8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸಮರ್ಥತೆ ಇಲ್ಲದೇ ಇಷ್ಟು ವರ್ಷ ಕೆಲಸ ಮಾಡುತ್ತಿರಲಿಲ್ಲ. ಎರಡು ಸಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ,” ಎಂದು ಅವರು ಹೇಳಿದ್ದಾರೆ. “ಉಪಮುಖ್ಯಮಂತ್ರಿ ಆಗಿದ್ದೇನೆ, ಕೆಲಸ ಮಾಡಿದ್ದೇನೆ. ಸಾಮರ್ಥ್ಯ ಇಲ್ಲದೇ ಉಪಮುಖ್ಯಮಂತ್ರಿ ಮಾಡ್ತಾರಾ ? ” ಎಂದು ಪ್ರಶ್ನಿಸುವ ಮೂಲಕ ತಮ್ಮ ರಾಜಕೀಯ ಭಾರವನ್ನು ಒತ್ತಿ ಹೇಳಿದ್ದಾರೆ .
ಈ ಹೇಳಿಕೆಗಳು ಪಕ್ಷದೊಳಗಿನ ಬಣ ರಾಜಕಾರಣದ ನಡುವೆ ಗಮನ ಸೆಳೆದಿವೆ. ಮುಖ್ಯಮಂತ್ರಿ Siddaramaiah ಹಾಗೂ ಉಪ ಮುಖ್ಯಮಂತ್ರಿ D. K. Shivakumar ಅವರ ಬಣಗಳ ನಡುವಿನ ಸಮೀಕರಣಗಳ ಮಧ್ಯೆ ಪರಮೇಶ್ವರ್ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದೆ. “ನನ್ನ ವಿಷಯದಲ್ಲಿ ಯಾರು ಪ್ರಶ್ನೆ ಮಾಡೋವಂತಿಲ್ಲ” ಎಂಬ ಅವರ ಮಾತುಗಳು ಪಕ್ಷ ನಿಷ್ಠೆಯ ಸಂದೇಶವೋ, ಅಥವಾ ರಾಜಕೀಯ ಹಕ್ಕಿನ ದಾವೋ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಪಕ್ಷದೊಳಗೆ ದಲಿತ ಸಮುದಾಯದ ನಾಯಕತ್ವ ಪ್ರಶ್ನೆ ಕೆಲಕಾಲದಿಂದಲೇ ಪ್ರಸ್ತಾಪವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. “ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾನು ಬದ್ಧ” ಎಂಬ ಮಾತುಗಳ ಮೂಲಕ ಅವರು ಶಿಸ್ತು ಹಾಗೂ ನಿಷ್ಠೆಯ ನಿಲುವು ತೋರಿದರೂ, ರಾಜಕೀಯ ವಲಯದಲ್ಲಿ ಇದನ್ನು ಭವಿಷ್ಯದ ನಾಯಕತ್ವದ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ, “ದಲಿತ ಸಿಎಂ” ಚರ್ಚೆ ಮತ್ತೊಮ್ಮೆ ರಾಜ್ಯ ರಾಜಕೀಯಕ್ಕೆ ಕಿಡಿ ಹಚ್ಚುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ನಿಲುವು ಏನಾಗುತ್ತದೆ ? ಪಕ್ಷದೊಳಗಿನ ಬಣ ರಾಜಕಾರಣ ಹೇಗೆ ತಿರುಗುತ್ತದೆ ? ಎಂಬುದರತ್ತ ರಾಜಕೀಯ ವಲಯ ನೊಡಬಹುದು …..
