Ashwaveega News 24×7 ಮಾರ್ಚ್ 02– 2026 : ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿದ ಕನ್ನಡಿಗರ ಪರದಾಟ ಮುಂದುವರಿದಿದೆ . ಬಾಗಲಕೋಟೆ ಜಿಲ್ಲೆಯ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಗಿರೀಶ್ ಕೆರೂರು ಇದೀಗ ಅಬುಧಾಬಿಯಲ್ಲಿ ಸಿಲುಕಿಕೊಂಡಿದ್ದಾರೆ .
ಕೆಲಸದ ನಿಮಿತ್ತ ಪ್ಯಾರಿಸ್ಗೆ ತೆರಳಲು ಗಿರೀಶ್ ಮೊನ್ನೆ ಬೆಳಿಗ್ಗೆ 4 ಗಂಟೆಗೆ ಬೆಂಗಳೂರುಯಿಂದ ಹೊರಟಿದ್ದರು . ಅವರ ಪ್ರಯಾಣವು ದುಬೈ ಮಾರ್ಗವಾಗಿ ಪ್ಯಾರಿಸ್ ತಲುಪಬೇಕಾಗಿತ್ತು. ಆದರೆ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿಮಾನ ಸಂಚಾರ ವ್ಯತ್ಯಯಗೊಂಡಿದ್ದು, ಅವರ ಮುಂದಿನ ಫ್ಲೈಟ್ ರದ್ದಾಗಿದೆ .
ಫ್ಲೈಟ್ ರದ್ದಾದ ಹಿನ್ನೆಲೆ ಗಿರೀಶ್ ಅಬುಧಾಬಿಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಏರ್ಲೈನ್ ಸಂಸ್ಥೆ ಹೋಟೆಲ್ ವ್ಯವಸ್ಥೆ ಮಾಡಿರುವುದರಿಂದ ಅವರು ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. “ಇಲ್ಲಿ ಯಾವುದೇ ತೊಂದರೆ ಇಲ್ಲ. ನಾವು ಸೇಫ್ ಆಗಿದ್ದೇವೆ. ಆದರೆ ಭಾರತಕ್ಕೆ ಮರಳುವ ಬಗ್ಗೆ ಸ್ಪಷ್ಟತೆ ಇಲ್ಲ. ಫ್ಲೈಟ್ ಸಿಕ್ಕರೆ ತಕ್ಷಣ ಇಂಡಿಯಾಗೆ ಬರುತ್ತೇವೆ,” ಎಂದು ಗಿರೀಶ್ ತಿಳಿಸಿದ್ದಾರೆ.
ಅಬುಧಾಬಿಯ ಹೋಟೆಲ್ನಲ್ಲಿ ಇರುವ ಗಿರೀಶ್ ಗಿರಿಮಲ್ಲಪ್ಪ ಕೆರೂರು ಅವರ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚಾದರೆ ವಿಮಾನ ಸಂಚಾರ ಇನ್ನಷ್ಟು ವ್ಯತ್ಯಯಗೊಳ್ಳುವ ಸಾಧ್ಯತೆ ಇರುವುದರಿಂದ, ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಮನವಿ ಕೇಳಿಬರುತ್ತಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಇಲಾಖೆ ನಿಕಟವಾಗಿ ಗಮನಿಸುತ್ತಿದ್ದು, ಪ್ರಯಾಣಿಕರಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
