Ashwaveega News 24×7 ಮಾರ್ಚ್ 05 – 2026 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೂ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಅಸ್ಥಿರತೆ ಕಂಡುಬರುತ್ತಿದೆ.
ಯುದ್ಧದ ಆತಂಕ ಹೆಚ್ಚಾಗುತ್ತಿದ್ದಂತೆ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುವ ಬಂಗಾರದತ್ತ ಮುಖ ಮಾಡಿರುವುದರಿಂದ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿತ್ತು. ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ ಸುಮಾರು 1 ಲಕ್ಷ 65 ಸಾವಿರ ರೂಪಾಯಿ ಸುತ್ತಮುತ್ತ ಟ್ರೇಡ್ ಆಗುತ್ತಿದೆ.
ಆದರೆ ಕಳೆದ ಎರಡು ದಿನಗಳಿಂದ ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿಲ್ಲ. ಕೆಲ ಸಮಯ ಏರಿಕೆ, ಮತ್ತೆ ಕೆಲ ಸಮಯ ಇಳಿಕೆ ಕಾಣಿಸುತ್ತಿರುವುದರಿಂದ ಬಂಗಾರದ ದರದಲ್ಲಿ ಹಾವು-ಏಣಿ ಆಟ ನಡೆಯುತ್ತಿರುವಂತಾಗಿದೆ .
ಮತ್ತೊಂದೆಡೆ ಬೆಳ್ಳಿಯ ದರದಲ್ಲೂ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ. ಸದ್ಯ ಒಂದು ಕೆಜಿ ಬೆಳ್ಳಿಯ ಬೆಲೆ ಸುಮಾರು 2 ಲಕ್ಷ 73 ಸಾವಿರ ರೂಪಾಯಿ ಮಟ್ಟದಲ್ಲಿ ಸ್ಥಿರವಾಗಿದೆ ..
ಯುದ್ಧದ ಆರಂಭದಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳು ಭಾರೀ ಕುಸಿತ ಕಂಡಿದ್ದರೂ, ಇದೀಗ ನಿಧಾನವಾಗಿ ಚೇತರಿಕೆ ಕಾಣಿಸುತ್ತಿವೆ. ಹೂಡಿಕೆದಾರರು ಪರಿಸ್ಥಿತಿಯನ್ನು ಗಮನಿಸುತ್ತಾ ಮಾರುಕಟ್ಟೆಯಲ್ಲಿ ಮರುಹೂಡಿಕೆ ಮಾಡುತ್ತಿರುವುದು ಇದರ ಪ್ರಮುಖ ಕಾರಣವಾಗಿದೆ .
ಒಟ್ಟಾರೆ ಯುದ್ಧದ ಪರಿಣಾಮವಾಗಿ ಚಿನ್ನ, ಬೆಳ್ಳಿ ಹಾಗೂ ಷೇರು ಮಾರುಕಟ್ಟೆಗಳಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಸ್ಥಿರತೆ ಕಂಡು ಬರುವ ಸಾಧ್ಯತೆ ಇದೆ.
