Ashwaveega News 24×7 ಮಾರ್ಚ್ 08 – 2026 : ಕಲಬುರ್ಗಿ: ದೆಹಲಿಗೆ ತೆರಳುವ ಮುನ್ನವೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಘಟನೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ .
ಖರ್ಗೆಯ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದರು. ವಿಶೇಷ ವಿಮಾನದಲ್ಲಿ ಚಿತ್ತಾಪುರಕ್ಕೆ ಆಗಮಿಸಿದ ಡಿಕೆ, ಖರ್ಗೆ ಹಾಗೂ ಅವರ ಪುತ್ರರ ಜೊತೆ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿ ಸುಮಾರು ಹತ್ತು ರಿಂದ ಹದಿನೈದು ನಿಮಿಷಗಳ ಕಾಲ ಡಿಕೆ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವೆ ಗುಸುಗುಸು ಮಾತುಕತೆ ನಡೆದಿದ್ದು, ಇದು ಎಲ್ಲರ ಗಮನ ಸೆಳೆಯಿತು. ಇಬ್ಬರು ನಾಯಕರು ಯಾವ ವಿಷಯದ ಬಗ್ಗೆ ಚರ್ಚಿಸಿದರು ಎಂಬುದರ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳು ಜೋರಾಗಿವೆ.
ಕಾರ್ಯಕ್ರಮ ಮುಗಿದ ಬಳಿಕ ಡಿಕೆ ಶಿವಕುಮಾರ್ ಕಾರಿನಲ್ಲಿ ಕಲಬುರ್ಗಿಗೆ ತೆರಳಿದರು. ಅಲ್ಲಿಂದ ಕೆಲವೇ ಕ್ಷಣಗಳಲ್ಲಿ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸುವ ಯೋಜನೆ ರೂಪಿಸಿದ್ದಾರೆ.
ಇಂದು ರಾತ್ರಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಯಾವ ರೀತಿಯ ‘ಗ್ರೀನ್ ಸಿಗ್ನಲ್’ ನೀಡಲಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ಇನ್ನೂ ಇದೇ ಭೇಟಿಯಲ್ಲಿ ಮುಂದಿನ ರಾಜಕೀಯ ಚರ್ಚೆಗಳಿಗೆ ವೇದಿಕೆ ಸಿದ್ಧವಾಗಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.
