Ashwaveega News 24×7 ಮಾರ್ಚ್ 08 – 2026 : ಬೆಳಗಾವಿ: ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ವಿಚಾರ ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೊಸ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಗುತ್ತಿಗೆದಾರರು ನಡೆಸುತ್ತಿರುವ ಪ್ರತಿಭಟನೆ ನ್ಯಾಯಸಮ್ಮತವಾಗಿದೆ ಎಂದು ಸವದಿ ಹೇಳಿದ್ದಾರೆ. “ಗುತ್ತಿಗೆದಾರರು ಎಷ್ಟು ದಿನ ಕಾಯಲು ಸಾಧ್ಯ? ಅವರಿಗೆ ಸಾಕಷ್ಟು ಆರ್ಥಿಕ ಸಮಸ್ಯೆಗಳು ಎದುರಾಗಿವೆ” ಎಂದು ಅವರು ಹೇಳಿದರು.
ಈ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುತ್ತಿಗೆದಾರರಿಗೆ ಸಾಂತ್ವನ ಹೇಳಿದ್ದು, ಬಾಕಿ ಹಣ ಪಾವತಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಸವದಿ ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧವೂ ಸವದಿ ತೀವ್ರ ಟೀಕೆ ನಡೆಸಿದರು. “ಬಿಜೆಪಿ ಆಡಳಿತದ ವೇಳೆ ಸುಮಾರು 32 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿ ಹೋಗಿದ್ದಾರೆ. ಈ ಬಾಕಿ ಹಣವನ್ನು ನಮ್ಮ ಸರ್ಕಾರವೇ ಕ್ಲಿಯರ್ ಮಾಡಲಿದೆ” ಎಂದು ಹೇಳಿದರು.
ಹೊಸ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸುವ ಬದಲು ಮೊದಲು ಹಳೆಯ ಬಾಕಿಗಳನ್ನು ತೀರಿಸುವುದಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಬಾಕಿ ಹಣವನ್ನು ಕ್ಲಿಯರ್ ಮಾಡುವ ಉದ್ದೇಶವಿದೆ ಎಂದು ಸವದಿ ಸ್ಪಷ್ಟಪಡಿಸಿದರು.
ಆದರೆ ಸವದಿ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಟೀಕೆ ನಡೆಸುತ್ತಲೇ ಪರೋಕ್ಷವಾಗಿ ಮುಖ್ಯಮಂತ್ರಿ ಮೇಲೂ ಸವದಿ ಟಾಂಗ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಗುತ್ತಿಗೆದಾರರ ಬಾಕಿ ಹಣ ತಕ್ಷಣವೇ ಜೇಬಿಗೆ ಬೀಳುತ್ತದೆಯೇ, ಅಥವಾ ಇನ್ನೂ ಕಾಯಬೇಕಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
