Ashwaveega News 24×7 ಮಾರ್ಚ್ 09 – 2026 : ನವದೆಹಲಿ: ದೇಶದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಅವಧಿಯಲ್ಲಿ ಈಗಿನಿಂದ ಹೆಚ್ಚುವರಿ ಅಂತರ ಕಡ್ಡಾಯವಾಗಿದ್ದು, ಗ್ರಾಹಕರು ಹೊಸ ನಿಯಮ ಪಾಲಿಸಬೇಕಾಗಿದೆ.
ಈವರೆಗೆ ಒಂದು ಸಿಲಿಂಡರ್ ಡೆಲಿವರಿ ಆದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡಲು 15 ದಿನಗಳ ಅಂತರ ಇತ್ತು. ಆದರೆ ಈಗ ಕೇಂದ್ರ ಸರ್ಕಾರ ಈ ಅವಧಿಯನ್ನು 21 ದಿನಗಳಿಗೆ ಹೆಚ್ಚಿಸಿದೆ. ಅಂದರೆ, ಒಂದು ಸಿಲಿಂಡರ್ ಡೆಲಿವರಿ ಆದ ಬಳಿಕ 21 ದಿನಗಳ ನಂತರವೇ ಮತ್ತೊಂದು ಸಿಲಿಂಡರ್ ಬುಕ್ ಮಾಡಬಹುದಾಗಿದೆ.
ಈ ಹೊಸ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಅದರಂತೆ ಗ್ಯಾಸ್ ಏಜೆನ್ಸಿಗಳ ಸಾಫ್ಟ್ವೇರ್ ಕೂಡ ಅಪ್ಡೇಟ್ ಮಾಡಲಾಗಿದೆ. 21 ದಿನಗಳ ಅವಧಿಗೆ ಮುನ್ನ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಅವಕಾಶ ಇರದಂತೆ ಲಾಕ್ ಸಿಸ್ಟಂ ಜಾರಿಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ಪರಿಸ್ಥಿತಿಗಳು, ವಿಶೇಷವಾಗಿ ಗಲ್ಫ್ ಪ್ರದೇಶದ ಯುದ್ಧ ಪರಿಸ್ಥಿತಿಯ ಪರಿಣಾಮದಿಂದ ಎಲ್ಪಿಜಿ ಸರಬರಾಜಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ . ಆದರೆ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ .
ಗ್ರಾಹಕರು ಗಾಬರಿಯಾಗಬೇಕಾದ ಅಗತ್ಯ ಇಲ್ಲ. ನೀವು ಸಿಲಿಂಡರ್ ಬುಕ್ ಮಾಡಿದ ಬಳಿಕ ಸಾಮಾನ್ಯವಾಗಿ 24 ಗಂಟೆಗಳೊಳಗೆ ಡೆಲಿವರಿ ನೀಡುವ ವ್ಯವಸ್ಥೆ ಮುಂದುವರಿಯುತ್ತದೆ. ಸರಬರಾಜು ವ್ಯತ್ಯಯವಾಗದಂತೆ ಭಾನುವಾರಗಳಲ್ಲಿಯೂ ಬಾಟ್ಲಿಂಗ್ ಪ್ಲಾಂಟ್ಗಳನ್ನು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ .
ಈ ಹೊಸ ನಿಯಮ ತಾತ್ಕಾಲಿಕವಾಗಿರುತ್ತದೆಯೇ ಅಥವಾ ಶಾಶ್ವತವಾಗಿ ಜಾರಿಯಾಗುತ್ತದೆಯೇ ಎಂಬುದರ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಿದೆ. ಕೆಲವೇ ದಿನಗಳ ಹಿಂದೆ ಡೊಮೆಸ್ಟಿಕ್ ಹಾಗೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರದಲ್ಲೂ ಹೆಚ್ಚಳ ಮಾಡಲಾಗಿತ್ತು .
