Ashwaveega News 24×7 ಮಾರ್ಚ್ 10 – 2026 : ಬೆಂಗಳೂರು : ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಅಡುಗೆಮನೆಗಳಿಗೂ ತಟ್ಟಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಕೊರತೆ ಬೆಂಗಳೂರಿನಲ್ಲಿ ತೀವ್ರವಾಗಿದ್ದು, ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ನಿನ್ನೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಪೂರೈಕೆ ಸರಿಯಾಗಿ ಆಗಿಲ್ಲ. ಇಂದೂ ಪೂರೈಕೆ ಆಗದಿದ್ದರೆ ಹಲವಾರು ಹೋಟೆಲ್ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧದ ಪರಿಣಾಮದಿಂದ ಅಗತ್ಯವಿರುವಷ್ಟು ಸಿಲಿಂಡರ್ ಪೂರೈಕೆ ಆಗುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕೂಡ ಕೇಂದ್ರ ಸರ್ಕಾರ ಇನ್ನೂ ಕಲ್ಪಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಬೆಂಗಳೂರು ನಗರದಲ್ಲೇ ಸುಮಾರು 20 ಸಾವಿರ ರೆಸ್ಟೋರೆಂಟ್ಗಳು, 5 ಸಾವಿರ ಲಾಡ್ಜ್ಗಳು, ಮತ್ತು ಸುಮಾರು 580 ಪಂಚತಾರಾ ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಜೊತೆಗೆ ಬೀದಿಬದಿ ಹೋಟೆಲ್ಗಳು, ಕ್ಯಾಟರಿಂಗ್ ಸೇವೆಗಳು, ಮದುವೆ-ಮುಂಜಿ ಹಾಗೂ ವಿವಿಧ ಕಾರ್ಯಕ್ರಮಗಳ ಮೇಲೂ ಈ ಗ್ಯಾಸ್ ಕೊರತೆ ಪರಿಣಾಮ ಬೀರುವ ಸಾಧ್ಯತೆ ಇದೆ .
ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಅಯೋಮಯವಾಗಿರುವುದು ಹೋಟೆಲ್ ಉದ್ಯಮದಲ್ಲಿ ಆತಂಕ ಹೆಚ್ಚಿಸಿದೆ. ಗಲ್ಫ್ ರಾಷ್ಟ್ರಗಳ ಯುದ್ಧದ ಬಿಸಿ ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ತಟ್ಟಿದ್ದು, ಗ್ಯಾಸ್ ಪೂರೈಕೆ ಸಮಸ್ಯೆ ಬೆಂಗಳೂರು ಮಾತ್ರವಲ್ಲ ದೇಶಾದ್ಯಂತ ಎದುರಾಗುವ ಭೀತಿ ಇದೆ.
