Ashwaveega News 24×7 ಮಾರ್ಚ್ 11 – 2026 : ಬೆಂಗಳೂರು : ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಚಿನ್ನ ಮತ್ತು ಬೆಳ್ಳಿಯ ಕಡೆ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ತಿರುಗುತ್ತಿರುವ ಹಿನ್ನೆಲೆ ದರಗಳು ದಿನೇದಿನೇ ಗಗನಕ್ಕೇರುತ್ತಿವೆ.
ಇದರಿಂದ ಆಭರಣ ಖರೀದಿಸಲು ಯೋಜನೆ ಮಾಡಿಕೊಂಡಿದ್ದ ಗ್ರಾಹಕರಿಗೆ ದೊಡ್ಡ ಶಾಕ್ ಎದುರಾಗಿದೆ. ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳಿಯ ದರ ಮತ್ತೆ 3 ಲಕ್ಷ ರೂಪಾಯಿ ಸನಿಹ ತಲುಪಿದ್ದು, ಪ್ರಸ್ತುತ ಒಂದು ಕೆಜಿ ಬೆಳ್ಳಿ ದರ ಸುಮಾರು 2 ಲಕ್ಷ 86 ಸಾವಿರ ರೂಪಾಯಿ ಆಗಿದೆ .
ಬೆಳ್ಳಿಯಷ್ಟೇ ಅಲ್ಲ, ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆ ದಾಖಲಾಗಿದೆ. ಪ್ರಸ್ತುತ 10 ಗ್ರಾಂ ಚಿನ್ನದ ದರ 1 ಲಕ್ಷ 68 ಸಾವಿರ ರೂಪಾಯಿ ತಲುಪಿದೆ. ಕೇವಲ ನಿನ್ನೆಯೊಂದೇ ದಿನದಲ್ಲಿ ಚಿನ್ನದ ದರ ಸುಮಾರು 4 ಸಾವಿರ ರೂಪಾಯಿ ಹೆಚ್ಚಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಅಂತರಾಷ್ಟ್ರೀಯ ಮಾರುಕಟ್ಟೆಯ ಏರುಪೇರು, ಯುದ್ಧ ಪರಿಸ್ಥಿತಿ ಹಾಗೂ ಹೂಡಿಕೆದಾರರ ಸುರಕ್ಷಿತ ಆಸ್ತಿ ಕಡೆಗೆ ಮುಖಮಾಡುವ ಪ್ರವೃತ್ತಿಯೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ತಜ್ಞರು ಹೇಳುತ್ತಿದ್ದಾರೆ.
ಇಂದಿಗೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತಷ್ಟು ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಗಮನಿಸುತ್ತಿರುವ ಗ್ರಾಹಕರು ಹಾಗೂ ವ್ಯಾಪಾರಿಗಳು ಮುಂದಿನ ಬೆಳವಣಿಗೆಗಳತ್ತ ಕಣ್ಣಿಟ್ಟಿದ್ದಾರೆ.
