Ashwaveega News 24×7 ಮಾರ್ಚ್ 11 – 2026 : ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಗ್ಯಾಸ್ ಸಮಸ್ಯೆ ಹೊಸ ತಲೆ ನೋವಾಗಿ ಪರಿಣಮಿಸಿದೆ. ಸಿಲಿಂಡರ್ ಕೊರತೆಯಿಂದಾಗಿ ಹಲವು ಪಿಜಿಗಳಲ್ಲಿ ಮಧ್ಯಾಹ್ನದ ಊಟವನ್ನು ಸ್ಥಗಿತಗೊಳಿಸಲಾಗಿದೆ .
ವೈಟ್ಫೀಲ್ಡ್ ಪಿಜಿ ವೆಲ್ಫೇರ್ ಅಸೋಸಿಯೇಷನ್ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಸಿಲಿಂಡರ್ ಸರಬರಾಜಿನಲ್ಲಿ ಉಂಟಾದ ಸಮಸ್ಯೆಯಿಂದಾಗಿ ಪಿಜಿಗಳಲ್ಲಿ ಮಧ್ಯಾಹ್ನದ ಊಟ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ.
ಸಿಲಿಂಡರ್ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಯುವವರೆಗೆ ಮಧ್ಯಾಹ್ನದ ಊಟ ನೀಡದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಪಿಜಿಗಳಲ್ಲಿ ವಾಸಿಸುವ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ .
ವಿಶೇಷವಾಗಿ ಬೇರೆ ಊರುಗಳಿಂದ ಕೆಲಸ ಹಾಗೂ ಓದಿಗಾಗಿ ಬಂದಿರುವ ಯುವಕರು, ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯೇ ದೊಡ್ಡ ಸಮಸ್ಯೆಯಾಗಿದೆ .
ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಮಂದಿ ಪಿಜಿಗಳಲ್ಲೇ ವಾಸಿಸುತ್ತಿರುವ ಹಿನ್ನೆಲೆ ಈ ಗ್ಯಾಸ್ ಸಮಸ್ಯೆ ದೊಡ್ಡ ಪರಿಣಾಮ ಬೀರಿದೆ. ಹಂತ ಹಂತವಾಗಿ ನಗರದ ವಿವಿಧ ವಲಯಗಳಿಗೂ ಗ್ಯಾಸ್ ಸಮಸ್ಯೆಯ ಪರಿಣಾಮ ತಟ್ಟುತ್ತಿದೆ .
