Ashwaveega News 24×7 ಮಾರ್ಚ್ 11 – 2026 : ಬೆಂಗಳೂರು : ಬೆಂಗಳೂರು: ನಗರದಲ್ಲಿ ಆಟೋ ನಿಲ್ದಾಣಗಳ ವಿಚಾರವಾಗಿ ಮತ್ತೊಮ್ಮೆ ಗಲಾಟೆ ಸದ್ದು ಮಾಡಿದೆ. ಪೀಣ್ಯ ಮೆಟ್ರೋ ಸ್ಟೇಷನ್ ಬಳಿ ಆಟೋ ನಿಲ್ಲಿಸಿದ್ದ ವಿಚಾರಕ್ಕೆ ಕೆಲ ಆಟೋ ಚಾಲಕರು ಮತ್ತೊಬ್ಬ ಚಾಲಕನಿಗೆ ಧಮ್ಕಿ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಪೀಣ್ಯ ಮೆಟ್ರೋ ಸ್ಟೇಷನ್ ಬಳಿ ಆಟೋ ಚಾಲಕ ಸತೀಶ್ ಪ್ರಯಾಣಿಕರಿಗಾಗಿ ತನ್ನ ಆಟೋವನ್ನು ನಿಲ್ಲಿಸಿದ್ದಾನೆ. ಇದೇ ವೇಳೆ ಅಲ್ಲಿದ್ದ ಕೆಲ ಆಟೋ ಚಾಲಕರು ಸತೀಶ್ ಬಳಿಗೆ ಬಂದು “ಇದು ನಮ್ಮ ಅಡ್ಡಾ… ನೀನು ಇಲ್ಲಿ ಏಕೆ ಆಟೋ ನಿಲ್ಲಿಸಿದ್ದೀಯ?” ಎಂದು ಪ್ರಶ್ನಿಸಿ ಗಲಾಟೆ ಆರಂಭಿಸಿದ್ದಾರೆ.
ಸತೀಶ್ ಆಟೋ ನಿಲ್ಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, “ನಮ್ಮ ಏರಿಯಾದಲ್ಲಿ ಎಲ್ಲಿಯೂ ಆಟೋ ನಿಲ್ಲಿಸಬಾರದು… ಇಲ್ಲಿ ಆಟೋ ನಿಲ್ಲಿಸಬೇಕಾದರೆ ನಮ್ಮ ಅನುಮತಿ ಬೇಕು” ಎಂದು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ .
ಘಟನೆ ವೇಳೆ ಕೆಲ ಚಾಲಕರು ಸತೀಶ್ ಜೊತೆ ತೀವ್ರವಾಗಿ ವಾಗ್ವಾದ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ “ಇದು ನಮ್ಮ ಅಡ್ಡಾ… ಇಲ್ಲಿ ಆಟೋ ನಿಲ್ಲಿಸೋಕೆ ಐಡೆಂಟಿಟಿ ಬೇಕು” ಎಂದು ಕೆಲವರು ಹೇಳುತ್ತಿರುವುದು ಕೇಳಿಬರುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕ ಸತೀಶ್ ವಿಡಿಯೋವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಆಟೋ ನಿಲ್ಲಿಸಿದ್ದಕ್ಕೆ ಈ ರೀತಿಯಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸಾರ್ವಜನಿಕ ರಸ್ತೆಗಳಲ್ಲೇ ಆಟೋ ನಿಲ್ಲಿಸಲು ಚಾಲಕರ ನಡುವೆ ಅಡ್ಡಾ ರಾಜಕೀಯ ನಡೆಯುತ್ತಿದೆ ಎಂಬ ಆರೋಪಗಳು ಮತ್ತೆ ಕೇಳಿಬರುತ್ತಿವೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೀಣ್ಯ ಮೆಟ್ರೋ ಸ್ಟೇಷನ್ ಬಳಿ ನಡೆದ ಈ ಘಟನೆ ಈಗ ಆಟೋ ಚಾಲಕರ ಅಡ್ಡಾ ಸಂಸ್ಕೃತಿಯ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.
