Ashwaveega News 24×7 ಮಾರ್ಚ್ 12 – 2026 : ಬೆಂಗಳೂರು : ರಾಜ್ಯ ಬಿಜೆಪಿಗೆ ಮುಂಬರುವ ಎರಡು ಕ್ಷೇತ್ರಗಳ ಉಪಚುನಾವಣೆಗಳು ಮಹತ್ವದ ಅಗ್ನಿಪರೀಕ್ಷೆಯಾಗಿ ಪರಿಣಮಿಸಿವೆ. ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳ ಬೈಎಲೆಕ್ಷನ್ ಗೆಲ್ಲಲು ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದೆ. ಕಳೆದ ಮೂರು ಉಪಚುನಾವಣೆಗಳಲ್ಲೂ ಕೇಸರಿಪಡೆಗೆ ಸೋಲು ಎದುರಾದ ಹಿನ್ನೆಲೆ ಈ ಬಾರಿ ಜಯ ಸಾಧಿಸುವುದು ಪಕ್ಷಕ್ಕೆ ಪ್ರತಿಷ್ಠೆಯ ವಿಚಾರವಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಈ ಉಪಚುನಾವಣೆಗಳು ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಪಕ್ಷದ ಒಳಗಿನ ಟಿಕೆಟ್ ಪೈಪೋಟಿಯೂ ಹೆಚ್ಚಾಗಿದೆ. ದಾವಣಗೆರೆ ಕ್ಷೇತ್ರದ ಟಿಕೆಟ್ಗಾಗಿ ನಾಲ್ವರು ಪ್ರಮುಖ ಆಕಾಂಕ್ಷಿಗಳು ಕಣಕ್ಕಿಳಿದಿದ್ದಾರೆ.
ಅಜಯ್ ಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಯಶವಂತರಾವ್ ಜಾದವ್ ಮತ್ತು ರಾಜನಹಳ್ಳಿ ಶಿವಕುಮಾರ್ ನಡುವೆ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ಶ್ರೀನಿವಾಸ್ ದಾಸಕರಿಯಪ್ಪ ಹಾಗೂ ಯಶವಂತರಾವ್ ಜಾದವ್ ಪರವಾಗಿ ಪಕ್ಷದ ಕೆಲ ನಾಯಕರು ಬಲವಾಗಿ ಬ್ಯಾಟಿಂಗ್ ಮಾಡುತ್ತಿರುವುದು ಟಿಕೆಟ್ ಸಮೀಕರಣವನ್ನು ಮತ್ತಷ್ಟು ಕಠಿಣಗೊಳಿಸಿದೆ.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ. ಹರೀಶ್ ಕೂಡ ತಮ್ಮ ಬಣದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ್ದು, ಬಂಡಾಯ ಬಣದ ಬೇಡಿಕೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಮತ ನೀಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಇದೀಗ ಬಾಗಲಕೋಟೆ ಕ್ಷೇತ್ರದಲ್ಲೂ ಟಿಕೆಟ್ ಪೈಪೋಟಿ ಜೋರಾಗಿದೆ. ವೀರಣ್ಣ ಚರಂತಿಮಠ ಮತ್ತು ಮಲ್ಲಿಕಾರ್ಜುನ್ ಚರಂತಿಮಠ ನಡುವೆ ಟಿಕೆಟ್ಗಾಗಿ ಸಮರ ನಡೆಯುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಕಾಂಕ್ಷಿಗಳ ಬಗ್ಗೆ ಸವಿಸ್ತಾರ ಚರ್ಚೆ ನಡೆದಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಉಪಚುನಾವಣೆಯ ಫಲಿತಾಂಶ ರಾಜ್ಯ ಬಿಜೆಪಿ ನಾಯಕತ್ವಕ್ಕೆ ಮಹತ್ವದ ಸೂಚನೆ ನೀಡುವ ಸಾಧ್ಯತೆಯಿದೆ.
