Ashwaveega News 24×7 ಮಾರ್ಚ್ 12 – 2026 ನವದೆಹಲಿ: ಜಾಗತಿಕ ಇಂಧನ ಸಂಕಷ್ಟದ ನಡುವೆಯೇ ಭಾರತಕ್ಕೆ ಇರಾನ್ ನೆರವು ನೀಡಲು ಮುಂದಾಗಿರುವ ಬೆಳವಣಿಗೆ ಗಮನ ಸೆಳೆಯುತ್ತಿದೆ. ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಹಲವು ದೇಶಗಳ ತೈಲ ಸಾಗಣೆ ಹಡಗುಗಳಿಗೆ ತೊಂದರೆ ಉಂಟಾಗಿದ್ದರೂ, ಭಾರತದ ಹಡಗುಗಳಿಗೆ ಸುರಕ್ಷಿತ ಮಾರ್ಗ ಒದಗಿಸುವುದಾಗಿ ಇರಾನ್ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.
ಅಮೆರಿಕ ಹಾಗೂ ಇಸ್ರೇಲ್ ವಿರುದ್ಧದ ಉದ್ವಿಗ್ನತೆಯ ನಡುವೆ ಇರಾನ್ ಕೆಲಕಾಲ ಹಾರ್ಮುಜ್ ಜಲಸಂಧಿ ಮಾರ್ಗವನ್ನು ನಿರ್ಬಂಧಿಸಿದ್ದರೆಂದು ವರದಿಗಳು ತಿಳಿಸಿವೆ. ಆದರೆ ಭಾರತದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ತೈಲ ಹಡಗುಗಳಿಗೆ ಮಾರ್ಗ ತೆರೆಯಲು ಇರಾನ್ ಒಪ್ಪಿದೆ .
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಸರಬರಾಜಿನ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ. ತೈಲ ಕೊರತೆಯ ಆತಂಕದ ನಡುವೆ ಭಾರತಕ್ಕೆ ಇಂಧನ ಸರಬರಾಜು ನಿರಂತರವಾಗಿರಲು ಈ ಕ್ರಮ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.
ರಾಜತಾಂತ್ರಿಕ ಮಾತುಕತೆಗಳ ಬಳಿಕ ಭಾರತಕ್ಕೆ ಸಹಕಾರ ನೀಡುವುದಾಗಿ ಇರಾನ್ ವಿದೇಶಾಂಗ ಇಲಾಖೆ ಸೂಚಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ನೌಕೆಗಳು ಸುರಕ್ಷಿತವಾಗಿ ಸಂಚರಿಸುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಲಾಗಿದೆ.
ಈ ಬೆಳವಣಿಗೆ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸಂಕಷ್ಟದ ಸಂದರ್ಭದಲ್ಲಿ ಯಾವ ದೇಶಗಳು ಭಾರತದ ಜೊತೆ ನಿಂತಿವೆ ಎಂಬ ವಿಚಾರವೂ ಮತ್ತೆ ಗಮನ ಸೆಳೆಯುತ್ತಿದೆ.
