Ashwaveega News 24×7 ಮಾರ್ಚ್ 12 – 2026 : ಬೆಂಗಳೂರು : ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಿದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ಕೆಲವರು ನಟ ಕಿಚ್ಚ ಸುದೀಪ್ ಅಭಿಮಾನಿಗಳೇ ಇದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಹೊರಬಂದಿದೆ.
ವಿಜಯಲಕ್ಷ್ಮಿ ದರ್ಶನ್ ಅವರನ್ನು ಟಾರ್ಗೆಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಪದ ಬಳಸಿ ಪೋಸ್ಟ್ ಮಾಡಿದ್ದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ವಿಚಾರಣೆ ವೇಳೆ ಆರೋಪಿಗಳಲ್ಲಿ ಕೆಲವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ .
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳ ವಿರುದ್ಧ ಬೆಂಗಳೂರು 45ನೇ ಎಸಿಎಂಎಂ ಕೋರ್ಟ್ಗೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಒಟ್ಟು 473 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಪ್ರಕರಣದ ಸಂಪೂರ್ಣ ವಿವರಗಳನ್ನು ಉಲ್ಲೇಖಿಸಲಾಗಿದೆ.
ತನಿಖೆ ವೇಳೆ ಅಶ್ಲೀಲ ಕಾಮೆಂಟ್ ಮಾಡಿದವರಲ್ಲಿ ಕೆಲವರು ಕಿಚ್ಚ ಸುದೀಪ್ ಅಭಿಮಾನಿಗಳಾಗಿರುವುದು ಗೊತ್ತಾಗಿದೆ. ಆದರೆ, ಈ ಪ್ರಕರಣದಲ್ಲಿ ಬಳಸಲಾಗಿದ್ದ ಇನ್ನೂ 12 ಫೇಕ್ ಸೋಷಿಯಲ್ ಮೀಡಿಯಾ ಅಕೌಂಟ್ಗಳ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ.
ಚಾರ್ಜ್ಶೀಟ್ ಸಲ್ಲಿಕೆಯ ನಂತರ ಆರೋಪಿಗಳು ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಜಾಮೀನು ಅರ್ಜಿಗಳ ವಿಚಾರಣೆಯನ್ನು ಮಾರ್ಚ್ 24ರಂದು ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಈ ಬೆಳವಣಿಗೆಯ ನಂತರ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ನಡುವೆ ಮತ್ತೊಂದು ಸುತ್ತಿನ ಫ್ಯಾನ್ ವಾರ್ ಆರಂಭವಾಗುವ ಸಾಧ್ಯತೆ ಕೂಡ ಕಾಣಿಸುತ್ತಿದೆ.
