Ashwaveega News 24×7 ಮಾರ್ಚ್ 13– 2026 : ಬೈಲಹೊಂಗಲ: ಬೈಲಹೊಂಗಲದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆ ನಡೆದ ಪ್ರತಿಭಟನೆ ವೇಳೆ ಡಿವೈಎಸ್ಪಿ ಮತ್ತು ಕನ್ನಡಪರ ಹೋರಾಟಗಾರರ ನಡುವೆ ತೀವ್ರ ವಾಗ್ವಾದ ಉಂಟಾಗಿ, ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಬೆಳಕಿಗೆ ಬಂದಿದೆ.
ಭ್ರಷ್ಟಾಚಾರದ ವಿರುದ್ಧ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಡಿವೈಎಸ್ಪಿ ವೀರಯ್ಯ ಹೋರಾಟಗಾರರಿಗೆ ಮನವಿ ಮಾಡಿದರು.
ಆದರೆ ಪೊಲೀಸರ ಮನವಿಯನ್ನು ಧಿಕ್ಕರಿಸಿ ಪ್ರತಿಭಟನಾಕಾರರು ಮುಂದೆ ಸಾಗಲು ಯತ್ನಿಸಿದರು. ಈ ವೇಳೆ ಡಿವೈಎಸ್ಪಿ ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ಜೋರಾಯಿತು .
“ನಾವು ಒಳಗೆ ನುಗ್ಗುತ್ತೇವೆ, ಏನ್ ಮಾಡ್ಕೋಳ್ತಿಯಾ?” ಎಂದು ಕೆಲ ಹೋರಾಟಗಾರರು ಡಿವೈಎಸ್ಪಿಗೆ ಪ್ರಶ್ನೆ ಎಸೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಸೆಡ್ಡು ಹೊಡೆದ ಡಿವೈಎಸ್ಪಿ “ಬಾ ನೋಡಿಕೋತ್ತೀನಿ” ಎಂದು ಪ್ರತಿಕ್ರಿಯೆ ನೀಡಿದ ಕ್ಷಣ ಪರಿಸ್ಥಿತಿ ತೀವ್ರಗೊಂಡಿತು.
ನಂತರ ಕೆಲಕಾಲ ತಳ್ಳಾಟ–ನೂಕಾಟವೂ ನಡೆದಿದ್ದು, ಪೊಲೀಸರು ಹೋರಾಟಗಾರರನ್ನು ಸ್ಥಳದಿಂದ ತೆರವುಗೊಳಿಸಿದರು. ಮೂರು ದಿನಗಳ ಹಿಂದೆ ನಡೆದ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಈ ಘಟನೆಗೆ ಸಂಬಂಧಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹೋರಾಟಗಾರರ ವಿರುದ್ಧ ಪೊಲೀಸರು ಆರೋಪ ಮಾಡಿದ್ದಾರೆ. ಇತ್ತ, ಹೋರಾಟವನ್ನು ಹತ್ತಿಕ್ಕಲು ಪೊಲೀಸರು ಯತ್ನಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಆರೋಪಿಸಿದ್ದಾರೆ.
