Ashwaveega News 24×7 ಮಾರ್ಚ್ 13– 2026 : ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದಾಗ ಮುಂದೆ ನಿಂತು ಹೊಣೆ ಹೊರುವ ನಾಯಕರಲ್ಲಿ ಪ್ರಮುಖ ಹೆಸರು ಡಿ.ಕೆ. ಶಿವಕುಮಾರ್. ಪಕ್ಷದ ಶಾಸಕರನ್ನು ಬಿಜೆಪಿಯ “ಆಪರೇಷನ್ ಕಮಲ”ದಿಂದ ರಕ್ಷಿಸಲು ಮತ್ತೆ ಡಿಕೆ ಸಾಹಸಕ್ಕೆ ಕೈ ಹಾಕಿದ್ದಾರೆ ಎನ್ನುವ ರಾಜಕೀಯ ಚರ್ಚೆಗಳು ಜೋರಾಗಿದೆ.
ಒಡಿಶಾದ 12 ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿಡಲು ಡಿಕೆ ವಿಶೇಷ ವ್ಯವಸ್ಥೆ ಮಾಡಿರುವುದಾಗಿ ತಿಳಿದುಬಂದಿದೆ. ಬೆಂಗಳೂರಿನ ವಂಡರ್ ಲಾ ರೆಸಾರ್ಟ್ನಲ್ಲಿ ಅವರಿಗೆ ವಸತಿ ಹಾಗೂ ಭದ್ರತೆ ಕಲ್ಪಿಸಲಾಗಿದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಶಾಸಕರ ಭದ್ರತೆಗೆ ತಮ್ಮ ಬೆಂಬಲಿಗರನ್ನೇ ನಿಯೋಜಿಸಿರುವುದು ಈ ಆಪರೇಷನ್ನ ವಿಶೇಷ.
ಇದೇ ಮೊದಲ ಸಲವಲ್ಲ. ಇದಕ್ಕೂ ಮೊದಲು ಗುಜರಾತ್ ಕಾಂಗ್ರೆಸ್ ಶಾಸಕರನ್ನು ಇದೇ ರೀತಿಯಲ್ಲಿ ರಕ್ಷಿಸಿ ಪಕ್ಷಕ್ಕೆ ಬಲ ತುಂಬಿದ ಉದಾಹರಣೆ ಇದೆ. ಆ ವೇಳೆ ಡಿಕೆ ದೊಡ್ಡ ಮಟ್ಟದಲ್ಲಿ ಟಾರ್ಗೆಟ್ ಆಗಿದ್ದರು. ರೆಸಾರ್ಟ್ ಪಾಲಿಟಿಕ್ಸ್ ನಡೆಯುತ್ತಿದ್ದ ಸಮಯದಲ್ಲೇ ಅವರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಹಾಗೂ ಇಡಿ ದಾಳಿ ನಡೆದಿತ್ತು.
ಈಗ ಮತ್ತೆ ಅಂಥದ್ದೇ ಸನ್ನಿವೇಶ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಅಸ್ಸಾಂ ಚುನಾವಣೆಯ ಸನ್ನಿವೇಶದ ನಡುವೆ ಈ ಬೆಳವಣಿಗೆಗಳು ಮತ್ತಷ್ಟು ಕುತೂಹಲ ಮೂಡಿಸುತ್ತಿವೆ.
ಪಕ್ಷಕ್ಕಾಗಿ ಎಂತಹದ್ದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಎಂಬುದಕ್ಕೆ ಡಿಕೆ ಮತ್ತೊಮ್ಮೆ ಉದಾಹರಣೆ ನೀಡುತ್ತಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಬಯಸಿದ ಸ್ಥಾನ ಸಿಗುವಲ್ಲಿ ವಿಳಂಬವಾದರೂ ಪಕ್ಷದ ಮೇಲೆ ಅವರ ನಿಷ್ಠೆ ಮತ್ತು ಬದ್ಧತೆ ಮಾತ್ರ ಕಡಿಮೆಯಾಗಿಲ್ಲ ಎಂಬುದು ಅವರ ಬೆಂಬಲಿಗರ ಅಭಿಪ್ರಾಯ.
ಇದೀಗ ಪ್ರಶ್ನೆ ಏನೆಂದರೆ – ಡಿಕೆ ಅವರ ಪಕ್ಷ ನಿಷ್ಠೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಹೈಕಮಾಂಡ್ ಪರಿಗಣಿಸುತ್ತದೆಯೇ? ಅಧಿವೇಶನ ಮುಗಿದ ತಕ್ಷಣ ಅವರಿಗೆ ಸಿಎಂ ಪಟ್ಟ ಸಿಗುತ್ತದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ರಾಜಕೀಯದಲ್ಲಿ ಮುಂದೇನು ನಡೆಯಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕು.
