Ashwaveega News 24×7 ಮಾರ್ಚ್ 13– 2026 : ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ವಿಚಾರದ ಚರ್ಚೆ ತಾರಕ್ಕೇರಿರುವ ನಡುವೆಯೇ, ಈಗ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಒಳಗೇ ಹೊಸ ಸಂಘರ್ಷ ಶುರುವಾಗಿದೆ. ಬಜೆಟ್ ಅಧಿವೇಶನದ ಮಧ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಟೆನ್ಶನ್ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ.
ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರು ಪೈಪೋಟಿಗೆ ಇಳಿದಿದ್ದಾರೆ. ಮೊದಲ ಬಾರಿ ಅಥವಾ ಕಡಿಮೆ ಅವಧಿಗೆ ಆಯ್ಕೆಯಾದ ಜೂನಿಯರ್ ಶಾಸಕರು ಸಚಿವ ಸ್ಥಾನ ನೀಡಬೇಕು ಎಂದು ಈಗಾಗಲೇ ಬೇಡಿಕೆ ಇಟ್ಟಿದ್ದರು. ಇದಕ್ಕೆ ಬೆನ್ನಲ್ಲೇ ಈಗ ಹಿರಿಯ ಶಾಸಕರು ಕೂಡ ತಮ್ಮ ಹಕ್ಕು ಮಂಡಿಸಲು ಮುಂದಾಗಿದ್ದಾರೆ.
ಮೂರುರಿಂದ ಆರು ಬಾರಿ ಆಯ್ಕೆಯಾದ ಅನುಭವಿಗಳಾದ ಕಾಂಗ್ರೆಸ್ ಹಿರಿಯ ಶಾಸಕರು ಸಭೆ ನಡೆಸಿ ಸಚಿವ ಸ್ಥಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಚಿವ ಸಂಪುಟದಲ್ಲಿ ತಮ್ಮನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸುವ ಧ್ವನಿ ಸಭೆಯಲ್ಲಿ ಕೇಳಿಬಂದಿದೆ.
ಇದೇ ವೇಳೆ ಸಚಿವ ಸಂಪುಟ ಪುನಾರಚನೆಗಾಗಿ ಕೂಡಲೇ ಒತ್ತಡ ಹೇರುವ ಕುರಿತು ಚರ್ಚೆ ನಡೆದಿದ್ದು, ಬಜೆಟ್ ಅಧಿವೇಶನದ ವೇಳೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಹಿರಿಯ ಶಾಸಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಈಗಾಗಲೇ 20ಕ್ಕೂ ಹೆಚ್ಚು ಶಾಸಕರು ಒತ್ತಡ ತರುತ್ತಿರುವುದಾಗಿ ಹೇಳಲಾಗುತ್ತಿದೆ. ಇದಲ್ಲದೆ, ವಿಷಯವನ್ನು ದೆಹಲಿಯ ಹೈಕಮಾಂಡ್ ಮಟ್ಟಕ್ಕೂ ತೆಗೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ.
ಅಧಿವೇಶನ ಮುಗಿದ ತಕ್ಷಣ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ತಿಳಿಸಲು ಹಿರಿಯ ಶಾಸಕರು ಯೋಜನೆ ರೂಪಿಸಿರುವ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ, ರಾಜ್ಯ ಕಾಂಗ್ರೆಸ್ನಲ್ಲಿ ಸೀನಿಯರ್ ಮತ್ತು ಜೂನಿಯರ್ ಶಾಸಕರ ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಈ ಒಳಸಂಘರ್ಷ ಯಾವ ತಿರುವು ಪಡೆಯಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
