Ashwaveega News 24×7 ಮಾರ್ಚ್ 13– 2026 : ಪ್ರಖ್ಯಾತ ಸ್ತ್ರೀರೋಗ ತಜ್ಞೆ ಹಾಗೂ ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್ ಅವರಿಗೆ ತಮ್ಮ ಸೊಸೆಯಿಂದಲೇ ಹಲ್ಲೆ ಹಾಗೂ ಮಾನಸಿಕ ಹಿಂಸೆ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ನಗರದ ಕುಮಾರ ಪಾರ್ಕ್ ಸಮೀಪ ಇರುವ ಡಾ. ಕಾಮಿನಿ ರಾವ್ ಅವರ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸೊಸೆಯಾದ ಪೂಜಾ ಸಿದ್ಧಾರ್ಥ್ ಅವರು ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಷೇರ್ ಪಡೆಯಲು ಒತ್ತಡ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆಸ್ತಿ ಸಂಬಂಧಿತ ಕಡತಗಳಿಗೆ ಸಹಿ ಮಾಡುವಂತೆ ಒತ್ತಾಯಿಸಿ ಸೊಸೆ ಪೂಜಾ ನಿರಂತರವಾಗಿ ಮಾನಸಿಕ ಹಿಂಸೆ ಹಾಗೂ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಡಾ. ಕಾಮಿನಿ ರಾವ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯ ವೇಳೆ ಬಲವಂತವಾಗಿ ಮೊಬೈಲ್ ಫೋನ್ ಹಾಗೂ ಮನೆಯ ಕೀಗಳನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ಮನೆಯ ಕಪಾಟಿನ ಕೀಗಳನ್ನು ಕೂಡ ಸೊಸೆ ಪೂಜಾ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಆ ಕಪಾಟಿನಲ್ಲಿ ಆಸ್ತಿ ಸಂಬಂಧಿತ ದಾಖಲೆಗಳು ಮತ್ತು ನಗದು ಹಣ ಇತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಫೆಬ್ರವರಿ 21ರಂದು ಈ ಗಲಾಟೆ ನಡೆದಿದ್ದರೂ ಕುಟುಂಬದ ಹಿತದೃಷ್ಟಿಯಿಂದ ತಕ್ಷಣ ದೂರು ನೀಡಿರಲಿಲ್ಲ ಎಂದು ಡಾ. ಕಾಮಿನಿ ರಾವ್ ತಿಳಿಸಿದ್ದಾರೆ. ಮೊಮ್ಮಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿಷಯವನ್ನು ಹೊರಗೆ ತರುವುದನ್ನು ತಪ್ಪಿಸಿದ್ದರು ಎಂದಿದ್ದಾರೆ.
ಆದರೆ ನಿರಂತರವಾಗಿ ನಡೆಯುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ತಾಳಲಾರದೆ ಇದೀಗ ಪೊಲೀಸರಿಗೆ ದೂರು ನೀಡಿದ್ದಾಗಿ ಡಾ. ಕಾಮಿನಿ ರಾವ್ ಹೇಳಿದ್ದಾರೆ . ಈ ಪ್ರಕರಣದ ಸಂಬಂಧ ಹೈಗ್ರೌಂಡ್ಸ್ ಪೊಲೀಸರು ತನಿಖೆ ಆರಂಭಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
