Ashwaveega News 24×7 ಮಾರ್ಚ್ 14– 2026 : ಬೆಂಗಳೂರಿನಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆಯ ಭೀತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ. ಅಗತ್ಯವಿಲ್ಲದೇ ಹೆಚ್ಚುವರಿ ಸಿಲಿಂಡರ್ ಬುಕ್ ಮಾಡಬಾರದು ಎಂದು ಅಪಾರ್ಟ್ಮೆಂಟ್ ಫೆಡರೇಶನ್ ಮನವಿ ಮಾಡಿದೆ.
ಕೆಲವರು ಅಗತ್ಯವಿಲ್ಲದಿದ್ದರೂ ಹೆಚ್ಚುವರಿ ಸಿಲಿಂಡರ್ ಬುಕ್ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದರಿಂದ ಇತರೆ ಕುಟುಂಬಗಳಿಗೆ ಸಿಲಿಂಡರ್ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಅಡುಗೆ ಕಾರ್ಯಗಳಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸುವಂತೆ ನಿವಾಸಿಗಳಿಗೆ ಸಲಹೆ ನೀಡಲಾಗಿದೆ. ಇಂಡಕ್ಷನ್ ಸ್ಟವ್, ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್ ಮತ್ತು ಏರ್ ಫ್ರೈಯರ್ ಬಳಕೆ ಮಾಡಿದರೆ ಗ್ಯಾಸ್ ಬಳಕೆ ಕಡಿಮೆಯಾಗುತ್ತದೆ .
ಒಟ್ಟಾರೆ ಅಡುಗೆ ಕಾರ್ಯಗಳಲ್ಲಿ ಸುಮಾರು 30 ರಿಂದ 40 ಶೇಕಡಾವರೆಗೆ ವಿದ್ಯುತ್ ಉಪಕರಣಗಳನ್ನು ಬಳಸಿದರೆ ಎಲ್ಪಿಜಿ ಬಳಕೆ ಕಡಿಮೆಯಾಗಬಹುದು ಎಂದು ಅಪಾರ್ಟ್ಮೆಂಟ್ ಫೆಡರೇಶನ್ ಹೇಳಿದೆ.
ಇದಲ್ಲದೆ, ಸಿಲಿಂಡರ್ ಕೊರತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೂಡ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ.
