Ashwaveega News 24×7 ಮಾರ್ಚ್ 14– 2026 : ಎಲ್ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ಇದೀಗ ಶುಭ ಸಮಾರಂಭಗಳ ಮೇಲೂ ತಟ್ಟಿದೆ. ಬೆಂಗಳೂರಿನಲ್ಲಿ ಸಿಲಿಂಡರ್ ಅಭಾವದಿಂದ ಮದುವೆ ಸಮಾರಂಭಗಳ ಆಯೋಜಕರು ಹಾಗೂ ಅಡುಗೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯುದ್ಧದ ಪರಿಸ್ಥಿತಿಗೂ ಮೊದಲು ಬುಕ್ ಆಗಿದ್ದ ಅನೇಕ ಮದುವೆ ಕಾರ್ಯಕ್ರಮಗಳಿಗೆ ಈಗ ಸಿಲಿಂಡರ್ ಸಿಗದೇ ತೊಂದರೆ ಎದುರಾಗಿದೆ. ಇದರ ಪರಿಣಾಮವಾಗಿ ಕೆಲವು ಮದುವೆ ಚೌಲ್ಟ್ರಿಗಳಲ್ಲಿ ಅಡುಗೆ ಮಾಡಲು ಸೌದೆ (ಮರದ ಇಂಧನ) ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ರಾಜಾಜಿನಗರದಲ್ಲಿರುವ ಸಪ್ತಗಿರಿ ಹಾಲ್ನಲ್ಲಿ ಕೂಡ ಇದೇ ರೀತಿಯ ದೃಶ್ಯ ಕಂಡುಬಂದಿದೆ. ಗ್ಯಾಸ್ ಸಿಲಿಂಡರ್ ಸಿಗದ ಕಾರಣ ಅಡುಗೆ ಮಾಡಲು ಸೌದೆ ಬಳಸಲಾಗುತ್ತಿದೆ. ಚೌಲ್ಟ್ರಿ ಮುಂಭಾಗದಲ್ಲೇ ಸೌದೆ ರಾಶಿ ಹಾಕಿರುವುದು ಗಮನ ಸೆಳೆದಿದೆ.
ಸಿಲಿಂಡರ್ ಕೊರತೆಯಿಂದ ಅಡುಗೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಇದರಿಂದ ಮದುವೆ ಆಯೋಜಕರಿಗೆ ಹೆಚ್ಚುವರಿ ತೊಂದರೆ ಉಂಟಾಗಿದೆ.
ಇದೀಗ ಸಿಲಿಂಡರ್ ಸರಬರಾಜು ಸಾಮಾನ್ಯ ಸ್ಥಿತಿಗೆ ಮರಳಬೇಕು ಎಂದು ಸಾರ್ವಜನಿಕರು ಹಾಗೂ ಸಮಾರಂಭ ಆಯೋಜಕರು ಆಗ್ರಹಿಸಿದ್ದಾರೆ.
