Ashwaveega News 24×7 ಮಾರ್ಚ್ 15 – 2026 : ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಸರು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಿಎಂ “ಕುರ್ಚಿ” ಮೇಲೆ ಕಣ್ಣು ಇಟ್ಟಿದ್ದಾರೆ ಎನ್ನುವ ಮಾತುಗಳ ನಡುವೆಯೇ, ಹೈಕಮಾಂಡ್ ನೀಡಿದ ಮಹತ್ವದ ಟಾಸ್ಕ್ನ್ನು ಡಿಕೆಶಿ ಸ್ವೀಕರಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. “ನಾಯಕತ್ವ ಅಂದ್ರೆ ಏನು ಬೇಕಾದರೂ ಮಾಡಬೇಕು… ಹೈಕಮಾಂಡ್ ಕೊಟ್ಟ ಜವಾಬ್ದಾರಿಗಾಗಿ ಯಾವ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತೇನೆ” ಎಂಬ ಸಂದೇಶವನ್ನು ಡಿಸಿಎಂ ಡಿಕೆಶಿ ತಮ್ಮ ನಡೆ ಮೂಲಕ ಮತ್ತೆ ನೀಡಿರುವಂತಾಗಿದೆ.
ಒಡಿಶಾದ ಕೆಲ ಶಾಸಕರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ, ಅವರನ್ನು ಸುರಕ್ಷಿತವಾಗಿಡುವ ಜವಾಬ್ದಾರಿ ಡಿಕೆಶಿ ಮೇಲೆ ಬಂದಿರುವುದು ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರ ಈಗ ಡಿಕೆಶಿಗೆ ಮತ್ತೆ ರಾಜಕೀಯ ರಿಸ್ಕ್ ತರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಇತಿಹಾಸ ಹೇಳುವಂತೆ, ಇದೇ ರೀತಿಯ ಒಂದು ರಾಜಕೀಯ “ಆಪರೇಷನ್” 2017ರಲ್ಲಿ ಡಿಕೆಶಿ ಅವರಿಗೆ ದೊಡ್ಡ ಸಂಕಷ್ಟವನ್ನು ತಂದಿತ್ತು.
2017ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿಡಲು ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಆ ಸಮಯದಲ್ಲಿ ಆಪರೇಷನ್ನ್ನು ನೋಡಿಕೊಂಡಿದ್ದವರು ಡಿ.ಕೆ. ಶಿವಕುಮಾರ್. ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಲು ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅದೇ ಸಮಯದಲ್ಲಿ ಡಿಕೆಶಿ ಮೇಲೆ ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳ ತನಿಖೆಯ ಬಿಸಿ ತಟ್ಟಿತ್ತು. ಆ ಪ್ರಕರಣಗಳು ಅವರ ರಾಜಕೀಯ ಬದುಕಿಗೆ ದೊಡ್ಡ ಪರೀಕ್ಷೆಯಾಗಿ ಪರಿಣಮಿಸಿತ್ತು.
ಒಟ್ಟಿನಲ್ಲಿ, ಹೈಕಮಾಂಡ್ ನೀಡಿದ ಟಾಸ್ಕ್ನ್ನು ಸ್ವೀಕರಿಸಿ ಮತ್ತೆ ರಾಜಕೀಯ ಮೈದಾನದಲ್ಲಿ ಧೈರ್ಯವಾಗಿ ನಡೆದುಕೊಂಡಿರುವ ಡಿಕೆಶಿ, ರಾಜ್ಯ ರಾಜಕೀಯದ ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಬಿಂದುವಾಗುವ ಸಾಧ್ಯತೆ ಇದೆ. ಸಿಎಂ ಕುರ್ಚಿಯತ್ತ ಕಣ್ಣಿಟ್ಟಿರುವ ನಾಯಕನ ರಾಜಕೀಯ ಪ್ರಯಾಣ ಈಗ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿದೆ.
