Ashwaveega News 24×7 ಮಾರ್ಚ್ 18– 2026 : ರಾಜ್ಯದ ವಿವಿಧ ಭಾಗಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಆಲಿಕಲ್ಲು ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಧಾರವಾಡ, ವಿಜಯಪುರ ಹಾಗೂ ಹಾಸನ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಮತ್ತು ಆಲಿಕಲ್ಲು ಸಮೇತ ಭಾರೀ ಮಳೆಯಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾಚಾಪುರ್ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸುರಿದ ಪರಿಣಾಮ, ರಸ್ತೆಗಳು ಮಿನಿ ಕಾಶ್ಮೀರದಂತೆ ಬಿಳಿ ಹೊದಿಕೆಯಿಂದ ಆವೃತವಾಗಿದ್ದವು . ಮನೆಗಳು , ವಾಹನಗಳು ಮತ್ತು ರಸ್ತೆ ಎಲ್ಲೆಡೆ ಆಲಿಕಲ್ಲುಗಳು ತುಂಬಿಕೊಂಡ ದೃಶ್ಯ ಕಂಡುಬಂದಿದೆ .
ಈ ಅಕಾಲಿಕ ಆಲಿಕಲ್ಲು ಮಳೆಯಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಬೆಳೆಗಳು ಹಾನಿಗೊಳಗಾಗಿದ್ದು, ಅಪಾರ ಪ್ರಮಾಣದ ಕೃಷಿ ನಷ್ಟ ವರದಿಯಾಗಿದೆ.
ಇದೇ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ದುರ್ಘಟನೆ ಸಂಭವಿಸಿದೆ. ವಂಟಮೂರಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಪರ್ವಿನ್ ಬೇಪಾರಿ (34) ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಗಾಳಿ-ಮಳೆಯ ಅಬ್ಬರದಿಂದ ಮರಗಳ ಕೊಂಬೆಗಳು ಮುರಿದು ಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹಲವೆಡೆ ವಿದ್ಯುತ್ ವ್ಯತ್ಯಯವೂ ಉಂಟಾಗಿದೆ. ಸ್ಥಳೀಯ ಆಡಳಿತಗಳು ಎಚ್ಚರಿಕೆ ನೀಡಿದ್ದು, ಜನರು ಅನಾವಶ್ಯಕವಾಗಿ ಹೊರಗೆ ತೆರಳದಂತೆ ಸೂಚನೆ ನೀಡಲಾಗಿದೆ.
