Ashwaveega News 24×7 ಮಾರ್ಚ್ 20 – 2026 : ದೇವನಹಳ್ಳಿ : ಯುಗಾದಿ ಹಬ್ಬದ ಸಂಭ್ರಮದ ನಡುವೆ ಗ್ರಾಮೀಣ ಸೊಗಡಿನ ಗುಡ್ಡೆ ಮಾಂಸಕ್ಕೆ ಭಾರೀ ಬೇಡಿಕೆ ಕಂಡುಬಂದಿದೆ. ದೇವನಹಳ್ಳಿ ತಾಲ್ಲೂಕಿನ ಯಲಿಯೂರಿನಲ್ಲಿ ನಡೆದ ಗುಡ್ಡೆ ಮಾಂಸ ಮಾರಾಟಕ್ಕೆ ಜನರು ಮುಗಿಬಿದ್ದು ಖರೀದಿಸುತ್ತಿರುವ ದೃಶ್ಯ ಕಂಡುಬಂದಿದೆ.
ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಲವೆಡೆಗಳಿಂದ ಜನರು ಆಗಮಿಸಿ, ನಾಟಿ ಕುರಿ ಹಾಗೂ ಮೇಕೆ ಮಾಂಸವನ್ನು ಖರೀದಿಸಲು ಸಾಲಿನಲ್ಲಿ ನಿಂತಿದ್ದರು. ಮಟನ್ ಪ್ರಿಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಸ್ಥಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ರಾತ್ರಿ 11 ಗಂಟೆಯಿಂದಲೇ ಗುಡ್ಡೆ ಮಾಂಸ ಮಾರಾಟ ಆರಂಭವಾಗಿದ್ದು, ಬೆಳಗಿನ ಜಾವಕ್ಕೂ ಜನರ ಹರಿವು ಕಡಿಮೆಯಾಗಲಿಲ್ಲ. ಸುಮಾರು 1000 ರಿಂದ 1500 ಕೆಜಿ ಮಾಂಸವನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರೈತರು ಪ್ರತಿ ಕೆಜಿ ಮಾಂಸವನ್ನು ಸುಮಾರು 800 ರೂಪಾಯಿಗೆ ಮಾರಾಟ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ನಾಟಿ ಮಾಂಸಕ್ಕಾಗಿ ಗ್ರಾಹಕರು ಹೆಚ್ಚು ಆಸಕ್ತಿ ತೋರಿದ್ದಾರೆ.
ಒಟ್ಟಿನಲ್ಲಿ, ಯುಗಾದಿ ಹಬ್ಬದ ಅಂಗವಾಗಿ ಗ್ರಾಮೀಣ ಪರಂಪರೆಯ ಗುಡ್ಡೆ ಮಾಂಸ ಮಾರಾಟ ಮತ್ತೆ ಜೀವಂತವಾಗಿದ್ದು, ನಗರ ಪ್ರದೇಶದ ಜನರೂ ಈ ಸೊಗಡನ್ನು ಆಸ್ವಾದಿಸಲು ಮುಂದಾಗಿರುವುದು ವಿಶೇಷವಾಗಿದೆ.
