Ashwaveega News 24×7 ಮಾರ್ಚ್ 20 – 2026 : ದಾವಣಗೆರೆ : ದಾವಣಗೆರೆ ಬಿಜೆಪಿ ರಾಜಕೀಯದಲ್ಲಿ ಇಂದು ಭಾರೀ ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ. ಟಿಕೆಟ್ ಘೋಷಣೆ ಬೆನ್ನಲ್ಲೇ ಇಂದು ಕೋರ್ ಕಮಿಟಿ ಸಭೆ ನಿಗದಿಯಾಗಿದ್ದು, ಪಕ್ಷದ ಒಳರಾಜಕೀಯ ತೀವ್ರಗೊಂಡಿದೆ.
ಈ ಸಭೆಯಲ್ಲಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ ಹಾಗೂ ಎಂ.ಪಿ. ರೇಣುಕಾಚಾರ್ಯ ಮುಖಾಮುಖಿಯಾಗುವ ಸಾಧ್ಯತೆ ಇದೆ. ಶ್ರೀನಿವಾಸ್ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡಿರುವ ವಿಚಾರಕ್ಕೆ ರೇಣುಕಾಚಾರ್ಯ ಟೀಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಘೋಷಣೆ ಮಾಡಬೇಕಿತ್ತು” ಎಂದು ರೇಣುಕಾಚಾರ್ಯ ಪರೋಕ್ಷವಾಗಿ ನಿನ್ನೆ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆ ಇಂದಿನ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಟಿಕೆಟ್ ಸಂಬಂಧ ರೇಣುಕಾಚಾರ್ಯ ತಂಡ ಸಾಕಷ್ಟು ಲಾಬಿ ನಡೆಸಿದ್ದರೂ, ಸಿದ್ದೇಶ್ವರ್ ತಂಡ ಅದನ್ನು ಮೆಟ್ಟಿನಿಂತು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವೇಳೆ, ಎಚ್.ಡಿ. ಕುಮಾರಸ್ವಾಮಿ ಅವರು ಪರೋಕ್ಷವಾಗಿ ಸಿದ್ದೇಶ್ವರ್ ತಂಡಕ್ಕೆ ಬೆಂಬಲ ನೀಡಿದ ಪರಿಣಾಮ, ಶ್ರೀನಿವಾಸ್ ದಾಸ ಕರಿಯಪ್ಪ ಅವರಿಗೆ ಟಿಕೆಟ್ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಯೆಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ, ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಸಿದ್ದೇಶ್ವರ್ ಮತ್ತು ರೇಣುಕಾಚಾರ್ಯ ಮುಖಾಮುಖಿ ವೇಳೆ ಭಾರೀ ಚರ್ಚೆ, ವಾಗ್ವಾದ ನಡೆಯುವ ಸಾಧ್ಯತೆ ಇದ್ದು, ದಾವಣಗೆರೆ ಬಿಜೆಪಿ ರಾಜಕೀಯದಲ್ಲಿ ಕುತೂಹಲ ತಾರಕ್ಕೇರಿದೆ.
