Ashwaveega News 24×7 ಮಾರ್ಚ್ 22 – 2026 : ದಾವಣಗೆರೆ: ದಾವಣಗೆರೆ ವಿಧಾನಸಭಾ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಕೊನೆಗೂ ಸಂಧಾನದ ಮೂಲಕ ಬಗೆಹರಿದಿದ್ದು, ಸಮರ್ಥ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕತ್ವ ಅಂತಿಮ ಒಪ್ಪಿಗೆ ನೀಡಿದೆ.
ಟಿಕೆಟ್ ಹಂಚಿಕೆ ಸಂಬಂಧ ಮುಸ್ಲಿಂ ನಾಯಕರು ಕೆಲವು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದರು. ಪ್ರಸ್ತುತ ಟಿಕೆಟ್ ನೀಡದಿದ್ದರೂ, ಭವಿಷ್ಯದಲ್ಲಿ ರಾಜ್ಯಸಭೆ ಹಾಗೂ ವಿಧಾನಪರಿಷತ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿತ್ತು.
ಇದೇ ವೇಳೆ, ಮುಂದಿನ ಚುನಾವಣೆಗಳಲ್ಲಿ ರಾಜಕೀಯ ಅವಕಾಶಗಳನ್ನು ಕಲ್ಪಿಸಬೇಕು ಎಂಬ ಶರತ್ತಿನ ಮೇರೆಗೆ ಟಿಕೆಟ್ ವಿಚಾರದಲ್ಲಿ ಹಿಂದೆ ಸರಿಯಲು ಮುಸ್ಲಿಂ ನಾಯಕರು ಸಿದ್ಧತೆ ತೋರಿದ್ದರು. ಇಲ್ಲದಿದ್ದರೆ ಸ್ವತಂತ್ರ ದಾರಿಯನ್ನು ಅನುಸರಿಸುವುದಾಗಿ ಎಚ್ಚರಿಸಿದ್ದರು.
ಈ ಹಿನ್ನೆಲೆ, ಹಿರಿಯ ನಾಯಕರು—ಸುರ್ಜೇವಾಲಾ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀವ್ರ ಚರ್ಚೆಗಳು ನಡೆದವು. ಕೊನೆಗೆ ಸಮನ್ವಯ ಸಾಧನೆಯಾಗಿ, ಶಾಮನೂರು ಕುಟುಂಬಕ್ಕೆ ಟಿಕೆಟ್ ಬಿಟ್ಟುಕೊಡಲು ಮುಸ್ಲಿಂ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.
ಈ ಸಂಧಾನದಲ್ಲಿ ಮುಸ್ಲಿಂ ನಾಯಕರು ತಮ್ಮ ಬೇಡಿಕೆಗಳಿಗೆ ಮಾನ್ಯತೆ ಪಡೆದುಕೊಂಡಿರುವುದಾಗಿ ಹೇಳಲಾಗುತ್ತಿದೆ. ಟಿಕೆಟ್ಗಾಗಿ ಪಟ್ಟು ಹಿಡಿದಿದ್ದವರು ಇದೀಗ ಮೌನ ವಹಿಸಿದ್ದು, ಒಳಾಂಗಣ ರಾಜಕೀಯ ಸಮತೋಲನ ಸಾಧನೆಯಾಗಿದೆ.
ಇದರಿಂದಾಗಿ, ಸಮರ್ಥ್ ಅವರು ನಾಳೆಯೇ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಅವರ ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಪ್ರಮುಖ ನಾಯಕರು ಸಾಥ್ ನೀಡಲಿದ್ದಾರೆ.
