Ashwaveega News 24×7 ಮಾರ್ಚ್ 24 – 2026 : ಬೆಂಗಳೂರು: ಕರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರುವ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ “ಸುವರ್ಣ ಗೃಹಮಂತ್ರಿ” ಇದೀಗ ತನ್ನ ಮೂರನೇ ಸೀಸನ್ನೊಂದಿಗೆ ಹೊಸತನದ ಹುರುಪಿನಲ್ಲಿ ಮತ್ತೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಖ್ಯಾತ ನಟ ರವಿಶಂಕರ್ ಗೌಡ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮವು ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುವ ಸಾಮಾನ್ಯ ಜನರ ರಿಯಾಲಿಟಿ ಶೋ ಆಗಿದೆ.
ಈಗಾಗಲೇ ಎರಡು ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಈ ಕಾರ್ಯಕ್ರಮವು ಸುಮಾರು 700 ಸಂಚಿಕೆಗಳ ಗಡಿಯನ್ನು ತಲುಪುತ್ತಿದೆ. ಹೊಸ ಸೀಸನ್ನ ಪ್ರಮುಖ ಆಕರ್ಷಣೆಯೆಂದರೆ, ಪ್ರತಿಯೊಂದು ಸಂಚಿಕೆಯಲ್ಲಿ ‘ಸುವರ್ಣ ಪರಿವಾರ’ದ ಕಲಾವಿದರು ಭಾಗವಹಿಸಲಿದ್ದಾರೆ. ಸ್ಟಾರ್ಗಳೊಂದಿಗೆ ಸಾಮಾನ್ಯ ಜನರ ನಡುವಿನ ರೋಚಕ ಸ್ಪರ್ಧೆಗಳು ಮತ್ತು ಮನರಂಜನಾತ್ಮಕ ಕ್ಷಣಗಳು ವೀಕ್ಷಕರಿಗೆ ಮತ್ತಷ್ಟು ರಂಜನೆ ನೀಡಲಿವೆ. ಮೊದಲ ಸಂಚಿಕೆಯಲ್ಲಿ ‘ಆಸೆ’ ಧಾರಾವಾಹಿಯ ಖ್ಯಾತಿಯ ‘ಮೀನಾ’ ಪಾತ್ರಧಾರಿ ಭಾಗವಹಿಸುವುದು ವಿಶೇಷವಾಗಿದೆ.

“ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಮೂಲ ಉದ್ದೇಶ ಗೃಹಿಣಿಯರ ಸೇವೆಯನ್ನು ಗೌರವಿಸುವುದು. ತಮ್ಮ ಕುಟುಂಬದ ಖುಷಿಗಾಗಿ ನಿರಂತರವಾಗಿ ಶ್ರಮಿಸುವ ಗೃಹಿಣಿಯರನ್ನು ಗುರುತಿಸಿ, ಅವರ ಮನೆಗೆ ಭೇಟಿ ನೀಡಿ, ಕುಟುಂಬದವರೊಂದಿಗೆ ಆಟ-ಪಾಟಗಳಲ್ಲಿ ತೊಡಗಿಸಿ, ಅವರ ಜೀವನ ಕಥೆಯನ್ನು ಪರಿಚಯಿಸಿ, ವಿಶೇಷವಾಗಿ ‘ರಾಣಿ ಸೀಟ್’ನಲ್ಲಿ ಕೂರಿಸಿ ಸನ್ಮಾನಿಸುವುದು ಈ ಕಾರ್ಯಕ್ರಮದ ವಿಶೇಷತೆ. ನಿರೂಪಕ ರವಿಶಂಕರ್ ಗೌಡ ಅವರು ಅಣ್ಣನ ಸ್ಥಾನದಲ್ಲಿ ನಿಂತು ತವರಿನ ಬಾಗಿನ ನೀಡುವ ಮೂಲಕ ಗೌರವ ಸೂಚಿಸುವುದು ಕಾರ್ಯಕ್ರಮದ ಹೃದಯಸ್ಪರ್ಶಿ ಅಂಶವಾಗಿದೆ.
ಹೊಸ ಸೀಸನ್ವು ಇನ್ನಷ್ಟು ಮನರಂಜನೆ, ಆಟ-ತುಂಟಾಟ ಹಾಗೂ ಭಾವನಾತ್ಮಕ ಕ್ಷಣಗಳನ್ನು ಒಳಗೊಂಡಿದ್ದು, ಇದೇ ಬುಧವಾರದಿಂದ (ಮಾರ್ಚ್ 25) ಪ್ರತಿದಿನ ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೀಕ್ಷಕರು ತಪ್ಪದೇ ವೀಕ್ಷಿಸಲು ಆಹ್ವಾನಿಸಲಾಗಿದೆ.

