Ashwaveega News 24×7 ಮಾರ್ಚ್ 24 – 2026 : ನವದೆಹಲಿ : ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ತೈಲ ಸರಬರಾಜಿನ ಮೇಲೆ ಒತ್ತಡ ಉಂಟಾಗಿರುವ ನಡುವೆಯೇ, ದೇಶದ ಜನತೆಗೆ ಆತಂಕಪಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಗೃಹ ಬಳಕೆ ಸಿಲಿಂಡರ್ಗಳ ಸರಬರಾಜಿಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಸ್ಪಷ್ಟಪಡಿಸಿದರು. ಯುದ್ಧದ ಹಿನ್ನೆಲೆ ತೈಲ ಕೊರತೆ ಉಂಟಾಗುವ ಸಾಧ್ಯತೆ ಇದ್ದರೂ, ದೇಶದಲ್ಲಿ ಅಗತ್ಯ ಮಟ್ಟಿನ ಸಂಗ್ರಹವಿದೆ ಎಂದು ಹೇಳಿದರು.
ಪ್ರಸ್ತುತ ಭಾರತದಲ್ಲಿ ಸುಮಾರು 53 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಗ್ರಹವಿದ್ದು, 40ಕ್ಕೂ ಹೆಚ್ಚು ದೇಶಗಳಿಂದ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ, ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಪರ್ಯಾಯ ಇಂಧನದ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದರು.
ಪೆಟ್ರೋಲ್ ಮತ್ತು ಡಿಸೇಲ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತೈಲ ಶುದ್ಧೀಕರಣ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಬಯೋ ಗ್ಯಾಸ್ ಬಳಕೆಯಿಂದ ಇಂಧನ ಕ್ಷೇತ್ರಕ್ಕೆ ಮತ್ತಷ್ಟು ಬಲ ನೀಡಲಾಗಿದೆ ಎಂದು ಹೇಳಿದರು.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಹಾರ್ಮಜ್ ಮಾರ್ಗದಿಂದ ಭಾರತದ ಹಡಗುಗಳು ಸುರಕ್ಷಿತವಾಗಿ ಹೊರಟಿರುವುದಾಗಿ ಮಾಹಿತಿ ನೀಡಿದ ಪ್ರಧಾನಿ, ಕಚ್ಚಾ ತೈಲದ ಪರ್ಯಾಯ ವ್ಯವಸ್ಥೆಗಳನ್ನೂ ಸರ್ಕಾರ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಯುದ್ಧವು ಮಾನವೀಯತೆಗೆ ವಿರುದ್ಧವಾಗಿದ್ದು, ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಪರಿಹರಿಸಬೇಕು ಎಂಬುದಾಗಿ ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಅಲ್ಲದೆ, ಸಂಘರ್ಷ ಪ್ರದೇಶಗಳಿಂದ 3 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ ಎಂದು ತಿಳಿಸಿದರು.
ಒಟ್ಟಿನಲ್ಲಿ, ದೇಶದ ಇಂಧನ ಭದ್ರತೆ ದೃಢವಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ .
