ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ರಾಷ್ಟ್ರೀಯ ಜಾನುವಾರು ಮಿಷನ್ ಅನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಅರ್ಹ ಯೋಜನಾ ವೆಚ್ಚದ ಶೇಕಡಾ 50 ರಷ್ಟು ಮೊತ್ತವನ್ನು ಸರ್ಕಾರವೇ ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಅಂದರೆ ನೀವು ಒಂದು ಕೋಟಿ ರೂಪಾಯಿ ವೆಚ್ಚದ ಘಟಕ ಸ್ಥಾಪಿಸಿದರೆ, ಅದರಲ್ಲಿ 50 ಲಕ್ಷ ರೂಪಾಯಿಗಳನ್ನು ಸರ್ಕಾರ ಭರಿಸಲಿದೆ. ಈ ಯೋಜನೆಯು ಕೇವಲ ವೈಯಕ್ತಿಕ ರೈತರಿಗೆ ಮಾತ್ರವಲ್ಲದೆ, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಸಹಕಾರಿ ಸಂಸ್ಥೆಗಳು ಮತ್ತು ಕಂಪನಿಗಳಿಗೂ ಅನ್ವಯಿಸುತ್ತದೆ.
ಕತ್ತೆಗಳ ಸಂಖ್ಯೆ ಕುಸಿಯಲು ಪ್ರಮುಖ ಕಾರಣಗಳೇನು ?

2019 ರ ಜಾನುವಾರು ಜನಗಣತಿಯ ಪ್ರಕಾರ, ಭಾರತದಲ್ಲಿ ಕತ್ತೆಗಳ ಸಂಖ್ಯೆಯು 2012 ಕ್ಕೆ ಹೋಲಿಸಿದರೆ ಸುಮಾರು ಶೇಕಡಾ 60 ರಷ್ಟು ಕಡಿಮೆಯಾಗಿದೆ. ಹಿಂದೆ ಗ್ರಾಮೀಣ ಸಾರಿಗೆ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಕತ್ತೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಆದರೆ ಯಾಂತ್ರೀಕೃತ ವಾಹನಗಳು ಮತ್ತು ಆಧುನಿಕ ಉಪಕರಣಗಳ ಆಗಮನದಿಂದ ಕತ್ತೆಗಳ ಬಳಕೆ ಕಡಿಮೆಯಾಯಿತು. ಈ ಕಾರಣದಿಂದಾಗಿ ಜನರು ಕತ್ತೆಗಳನ್ನು ಸಾಕುವುದನ್ನು ಬಿಟ್ಟಿದ್ದರು. ಈಗ ಸ್ಥಳೀಯ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸರ್ಕಾರವು ಈ ವಿಶೇಷ ಪ್ರೋತ್ಸಾಹಧನವನ್ನು ನೀಡುತ್ತಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು ?
ಈ ಯೋಜನೆಯ ಲಾಭ ಪಡೆಯಲು ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಅದರಂತೆ, ಒಂದು ಕತ್ತೆ ಸಾಕಾಣಿಕೆ ಘಟಕವು ಕನಿಷ್ಠ 50 ಹೆಣ್ಣು ಕತ್ತೆಗಳು ಮತ್ತು 5 ಗಂಡು ಕತ್ತೆಗಳನ್ನು ಹೊಂದಿರಬೇಕು. ಆಸಕ್ತರು ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಎನ್ಎಲ್ಎಂ ಉದ್ಯಮಿ ಮಿತ್ರ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲು ಬ್ಯಾಂಕ್ನಿಂದ ಸಾಲ ಅನುಮೋದನೆಯಾದ ನಂತರ ಮೊದಲ ಕಂತಿನ ಸಹಾಯಧನ ಬಿಡುಗಡೆಯಾಗುತ್ತದೆ. ಘಟಕದ ಕಾಮಗಾರಿ ಪೂರ್ಣಗೊಂಡು ಅಧಿಕಾರಿಗಳ ಪರಿಶೀಲನೆಯ ನಂತರ ಎರಡನೇ ಕಂತಿನ ಹಣವನ್ನು ನೀಡಲಾಗುತ್ತದೆ.
