Ashwaveega News 24×7 ಮಾರ್ಚ್ 25 – 2026 : ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೆ ಹಿಂದುತ್ವ ಅಜೆಂಡಾ ಸದ್ದು ಮಾಡುತ್ತಿರುವ ನಡುವೆಯೇ, “ಹಿಂದೂ ಹುಲಿ” ಮತ್ತು “ಹಿಂದೂ ಫೈರ್” ಎಂಬ ಬ್ರಾಂಡ್ಗಳು ಹೊಸ ಚರ್ಚೆಗೆ ಕಾರಣವಾಗಿವೆ. ಈ ಬೆಳವಣಿಗೆಯ ನಡುವೆ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯರಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.
ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹೆಗಡೆ, ಹಿಂದುತ್ವದ ವಿಚಾರವನ್ನು ಮತ್ತೊಮ್ಮೆ ಮುಂದಿಟ್ಟಿದ್ದಾರೆ. ಇದರಿಂದ ಅವರ ರಾಜಕೀಯ ಪುನರಾಗಮನದ ಬಗ್ಗೆ ಚರ್ಚೆಗಳು ಜೋರಾಗಿದೆ.
ಹಿಂದೆ ವಿವಾದಿತ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದ ಹೆಗಡೆ, ವಿಶೇಷವಾಗಿ ಸಂವಿಧಾನ ಬದಲಾವಣೆ ಕುರಿತ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ತಂದಿದ್ದರು. ಇದೇ ಕಾರಣಕ್ಕೆ ಅವರಿಗೆ ಬಿಜೆಪಿ ಟಿಕೆಟ್ ಸಿಗದೇ, ಕೆಲಕಾಲ ರಾಜಕೀಯದಿಂದ ದೂರ ಉಳಿಯಬೇಕಾಯಿತು.
ಹೆಗಡೆ ಅವರ ಹೇಳಿಕೆಗಳಿಂದ ರಾಷ್ಟ್ರೀಯ ಮಟ್ಟದಲ್ಲೂ ಬಿಜೆಪಿಗೆ ಡ್ಯಾಮೇಜ್ ಆಗಿದೆ ಎಂಬ ಟೀಕೆಗಳೂ ಕೇಳಿಬಂದಿದ್ದವು. ಇದರಿಂದ ಪಕ್ಷದೊಳಗೂ ಅವರ ವಿರುದ್ಧ ವಿರೋಧ ವ್ಯಕ್ತವಾಗಿತ್ತು.
ಆದರೆ ಇದೀಗ ಮತ್ತೆ ಯತ್ನಾಳ್ ಜೊತೆ ಕೈಜೋಡಿಸಿರುವುದು, ಹಾಗೂ ಕೆಲ ಆರ್ಎಸ್ಎಸ್ ನಾಯಕರ ಪ್ರೋತ್ಸಾಹದಿಂದ ಹೆಗಡೆ ರಾಜಕೀಯವಾಗಿ ಪುನಃ ಸಕ್ರಿಯರಾಗುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ಹಿಂದುತ್ವದ ಹೆಸರಿನಲ್ಲಿ ತಮ್ಮ ನಾಯಕತ್ವವನ್ನು ಬಲಪಡಿಸಿಕೊಳ್ಳಲು ಹೆಗಡೆ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಒಳಗೆ ಇನ್ನೂ ವಿರೋಧ ಇದ್ದರೂ, ಮತ್ತೆ ಪಕ್ಷದಲ್ಲಿ ಸ್ಥಾನ ಪಡೆಯಲು ಅವರು ರಾಜಕೀಯ ಲೆಕ್ಕಾಚಾರ ಆರಂಭಿಸಿರುವುದು ಸ್ಪಷ್ಟವಾಗಿದೆ.
ಮುಂದಿನ ದಿನಗಳಲ್ಲಿ ಹೆಗಡೆ ರಾಜಕೀಯ ಪಯಣ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
