Ashwaveega News 24×7 ಮಾರ್ಚ್ 25 – 2026 : ಬೆಂಗಳೂರು : ದಾವಣಗೆರೆ ಉಪಚುನಾವಣೆಯ ಅಖಾಡದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸಾದಿಕ್ ಪೈಲ್ವಾನ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಕಾಂಗ್ರೆಸ್ ಹೆಸರಿನಲ್ಲಿ ಸಲ್ಲಿಸಿದ್ದ ಅವರ ನಾಮಪತ್ರ ತಿರಸ್ಕೃತವಾಗಿದೆ.
ಪಕ್ಷದ ಅಧಿಕೃತ “ಬಿ ಫಾರಂ” ಇಲ್ಲದೇ ನಾಮಪತ್ರ ಸಲ್ಲಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿರುವ ಸಾದಿಕ್ ಪೈಲ್ವಾನ್ ಈ ಹಿಂದೆ ಪಕ್ಷದ ಅಭ್ಯರ್ಥಿಯಾಗಲು ಯತ್ನಿಸಿದ್ದರು.
ಆದರೆ, ಸಾದಿಕ್ ಪೈಲ್ವಾನ್ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ ನಾಮಪತ್ರವನ್ನು ಸ್ವೀಕರಿಸಲಾಗಿದೆ. ಹೀಗಾಗಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಒಟ್ಟು 39 ಅಭ್ಯರ್ಥಿಗಳಿಂದ 45 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ಬಳಿಕ ಮೂರು ನಾಮಪತ್ರಗಳು ತಿರಸ್ಕೃತವಾಗಿವೆ. ಬಿಜೆಪಿ ಹೆಸರಿನಲ್ಲಿ ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಿದ್ದ ಯಶವಂತರಾವ್ ಜಾಧವ್ ಅವರ ನಾಮಪತ್ರವೂ ತಿರಸ್ಕೃತವಾಗಿದೆ.
ಇದಲ್ಲದೆ, ಕರ್ನಾಟಕ ರಾಷ್ಟ್ರ ಸಮಿತಿಯ ಹೆಚ್.ಕೆ. ದಾವುಲ್ ಸಾಬ್ ಅವರ ನಾಮಪತ್ರವೂ ರದ್ದುಪಡಿಸಲಾಗಿದೆ. ಇದರಿಂದ ದಾವಣಗೆರೆ ರಣಕಣದಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ.
ನಾಮಪತ್ರ ಹಿಂಪಡೆಯಲು ನಾಳೆಯೇ ಕೊನೆಯ ದಿನವಾಗಿದ್ದು, ಚುನಾವಣಾ ಕಣ ಇನ್ನಷ್ಟು ಕಾವೇರಲಿದೆ. ಈ ನಡುವೆ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ವಿಶೇಷ ಗಮನ ಸೆಳೆಯುತ್ತಿದೆ.
ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜನ್ ಕಸರತ್ತು ಮುಂದುವರಿಸಿದ್ದಾರೆ. ಒಟ್ಟಾರೆ, ದಾವಣಗೆರೆ ಉಪಚುನಾವಣೆ ರಾಜಕೀಯವಾಗಿ ಭಾರೀ ಕುತೂಹಲ ಮೂಡಿಸಿದೆ.
