Ashwaveega News 24×7 ಮಾರ್ಚ್ 26 – 2026 : ಮೈಸೂರು: ಪ್ರೀತಿಯ ಹೆಸರಿನಲ್ಲಿ ಯುವತಿಯರನ್ನು ಟಾರ್ಗೆಟ್ ಮಾಡಿ ಅವರ ಬದುಕನ್ನೇ ಹಾಳು ಮಾಡಿದ ಆರೋಪದಡಿ ವೈದ್ಯ ವಿನಯ್ ಕುಮಾರ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಸೀನಿಯರ್ ವೈದ್ಯೆ ನಾಗಶ್ರೀ ಮತ್ತು ಅಕೌಂಟೆಂಟ್ ಗೌತಮಿ ಸೇರಿದಂತೆ ಇಬ್ಬರು ಯುವತಿಯರ ಜೊತೆ ಪ್ರೀತಿಯ ನಾಟಕವಾಡಿ, ಅವರ ಜೀವನದಲ್ಲಿ ಅನಾಹುತಕ್ಕೆ ಕಾರಣನಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ಈ ಪ್ರಕರಣದಲ್ಲಿ ಮೂರು ಹೆಣ್ಮಕ್ಕಳ ಬದುಕು ಬಲಿಯಾದ್ದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಈ ಮಧ್ಯೆ, ಆರೋಪಿ ವೈದ್ಯನ ಪತ್ನಿ ವಿನೋದಾ ಮಹತ್ವದ ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. “ಮದುವೆಗೂ ಮುಂಚೆ ಅವನ ನಿಜಸ್ವಭಾವ ಗೊತ್ತಿರಲಿಲ್ಲ. ಮದುವೆ ಆದ ದಿನವೇ ಅವನ ಕರಾಳ ಮುಖ ಗೊತ್ತಾಯಿತು. ಇಷ್ಟು ದಿನ ಮರ್ಯಾದೆಗೆ ಹೆದರಿ ಸುಮ್ಮನೆ ಇದ್ದೆ,” ಎಂದು ಅವರು ಹೇಳಿದ್ದಾರೆ.
ಅವರು ಮುಂದುವರಿಸಿ, “ಅವನು ನನ್ನ ಜೀವನವನ್ನೇ ಸರ್ವನಾಶ ಮಾಡಿದ್ದಾನೆ. ನನಗೆ ನಿರಂತರ ಕಿರುಕುಳ ನೀಡಿ ಡೆತ್ನೋಟ್ ಬರೆಯುವಂತೆ ಒತ್ತಾಯಿಸಿದ್ದಾನೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ, ಪೊಲೀಸರು ಈ ಪ್ರಕರಣದಲ್ಲಿ ‘ಬಿ ರಿಪೋರ್ಟ್’ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಹುಣಸೂರು ಠಾಣೆಗೆ ತೆರಳಿದರೂ ಸರಿಯಾದ ಸ್ಪಂದನೆ ಸಿಗಲಿಲ್ಲ ಎಂದು ವಿನೋದಾ ಆರೋಪಿಸಿದ್ದಾರೆ.
“ಧೈರ್ಯ ಮಾಡಿ ನನ್ನೆಲ್ಲ ನೋವುಗಳನ್ನ ಈಗ ಹೊರಹಾಕುತ್ತಿದ್ದೇನೆ. ಮೃತಪಟ್ಟಿರುವ ಎರಡು ಜೀವಗಳಿಗೆ ಶಾಂತಿ ಸಿಗಬೇಕಾದರೆ, ವಿನಯ್ ಕುಮಾರ್ಗೆ ತಕ್ಕ ಶಿಕ್ಷೆ ಆಗಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
