ashwaveega news 24×7 ಮಾರ್ಚ್26.2026:ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕಾರನ ಪಾತ್ರವಹಿಸಲಿರುವುದಾಗಿ ಹೇಳಿರುವ ಪಾಕಿಸ್ತಾನಕ್ಕೆ, ಭಾರತ ಸೂಕ್ತ ತಿರುಗೇಟು ನೀಡಿದೆ. ಈ ಕುರಿತು ಮಾತನಾಡಿರುವ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, “ಎರಡು ದೇಶಗಳ ನಡುವಿನ ಜಗಳ ಬಿಡಿಸಲು ಮತ್ತು ಅವರನ್ನು ಸಮಧಾನಪಡಿಸಲು ನಾವು ಪಾಕಿಸ್ತಾನಿಯರಂತೆ ಬ್ರೋಕರ್ಗಳಲ್ಲ” ಎಂದು ಸೂಚ್ಯವಾಗಿ ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್ ಕದನ ವಿರಾಮ ಒಪ್ಪಂದ ಮಾತುಕತೆಗಳನ್ನು ಪಾಕಿಸ್ತಾನದಲ್ಲಿ ನಡೆಸಲಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನ ರಕ್ಷಣಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನಡುವೆ ಮಾತುಕತೆ ನಡೆದಿದೆ ಎಂದು ಹೇಳಲಾಗಿತ್ತು. ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆ ಸಾಧ್ಯತೆ ಬಗ್ಗೆ ಭಾರತದಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ವಿಪಕ್ಷಗಳು ಇದನ್ನು ಭಾರತದ ವಿದೇಶಾಂಗ ನೀತಿಯ ಸೋಲು ಎಂದು ಕಿಡಿಕಾರಿದ್ದವು.

ಆದರೆ ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಭಾರತ, ಸಂಘರ್ಷದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ನಡೆಸಲು ತಾನು ಪಾಕಿಸ್ತಾನದ ರೀತಿ ದಲ್ಲಾಳಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ ನಿಜಕ್ಕೂ ಪಾಕಿಸ್ತಾನದ ಆತ್ಮಕ್ಕೆ ಪೆಟ್ಟು ಕೊಟ್ಟಂತಿದೆ. ಅಲ್ಲದೇ ಈ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಯಸಿದ್ದ ವಿಪಕ್ಷ ನಾಯಕರಿಗೂ ತಿರುಗೇಟು ನೀಡಿದಂತಿದೆ.
ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸದಂತೆ ಚರ್ಚಿಸಲು ನಿನ್ನೆ (ಮಾ.25-ಬುಧವಾರ) ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಡಾ.ಎಸ್. ಜೈಶಂಕರ್, “ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದಂತೆ ದಲ್ಲಾಳಿ ಅಥವಾ ಬ್ರೋಕರ್ ಕೆಲಸ ಮಾಡುವುದಿಲ್ಲ” ಎಂದು ಸ್ಪಷ್ಟವಾದ ಧ್ವನಿಯಲ್ಲಿ ಹೇಳಿದ್ದಾರೆ. ಅಲ್ಲದೇ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಭಾರತದ ನಿಲುವೇನು ಎಂಬುದನ್ನು, ಭಾರತದ ವಿದೇಶಾಂಗ ಸಚಿವರು ಈ ಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
