Ashwavega news 24×7 ಮಾರ್ಚ್26.2026 ಪಾಟ್ನಾ: ವಂದೇ ಭಾರತ್ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಕರಿಗೆ ನೀಡಲಾದ ಮೊಸರಿನಲ್ಲಿ ಹುಳುಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯು ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ.
ಹೌದು ಮಾರ್ಚ್ 15, 2026 ರಂದು ಪಾಟ್ನಾ -ಟಾಟಾನಗರ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಿತೇಶ ಕುಮಾರ್ ಸಿಂಗ್ ಎಂಬ ಪ್ರಯಾಣಿಕರಿಗೆ ರಾತ್ರಿಯ ಊಟದ ಸಮಯದಲ್ಲಿ ಮೊಸರು ಮತ್ತು ದಾಲ್ ನೀಡಲಾಗಿತ್ತು ಆ ಮೊಸರಿನ ಕಪ್ ತೆರೆದಾಗ ಅದರಲ್ಲಿ ಜೀವಂತ ಹುಳುಗಳು ಹರಿದಾಡುತ್ತಿರುವುದು ಕಂಡುಬಂದಿದೆ.

ತಕ್ಷಣವೇ ಅವರು ಈ ಬಗ್ಗೆ ರೈಲಿನಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಪ್ರಯಾಣಿಕರು ಹುಳುಗಳನ್ನು ತೋರಿಸಿದಾಗ, ಅಲ್ಲಿನ ಸಿಬ್ಬಂದಿ ಅದನ್ನು ಒಪ್ಪಿಕೊಳ್ಳುವ ಬದಲು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.
ಮೊಸರಿನಲ್ಲಿದ್ದ ಆ ವಸ್ತುಗಳು ಹುಳುಗಳಲ್ಲ, ಬದಲಾಗಿ ಅವು ‘ಕೇಸರಿ’ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ. ಈ ವಾದದಿಂದ ಆಕ್ರೋಶಗೊಂಡ ಪ್ರಯಾಣಿಕರು, ಹುಳುಗಳು ಜೀವಂತವಾಗಿ ಚಲಿಸುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಪಾಸಣೆಯ ವೇಳೆ ಆ ಮೊಸರು ಈಗಾಗಲೇ ಅವಧಿ ಮೀರಿರುವುದು ಕೂಡ ಪತ್ತೆಯಾಗಿದೆ.
ರೈಲ್ವೆ ಇಲಾಖೆಯ ಕಠಿಣ ಕ್ರಮ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರೈಲ್ವೆ ಸಚಿವಾಲಯ ಎಚ್ಚೆತ್ತುಕೊಂಡಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದೆ. ಆಹಾರದ ಮೇಲ್ವಿಚಾರಣೆಯಲ್ಲಿ ವೈಫಲ್ಯ ಕಂಡಿದ್ದಕ್ಕಾಗಿ ಐಆರ್ಸಿಟಿಸಿ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ರೈಲಿಗೆ ಆಹಾರ ಸರಬರಾಜು ಮಾಡುತ್ತಿದ್ದ ಖಾಸಗಿ ಸಂಸ್ಥೆಗೆ ಬರೋಬ್ಬರಿ 50 ಲಕ್ಷ ರೂಪಾಯಿ ದಂಡ ಹಾಕಲಾಗಿದೆ.
ಗುತ್ತಿಗೆ ರದ್ದು
ಇಷ್ಟೊಂದು ದೊಡ್ಡ ಮಟ್ಟದ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ, ಸದರಿ ಆಹಾರ ಸರಬರಾಜು ಸಂಸ್ಥೆಯ ಗುತ್ತಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲು ಆದೇಶಿಸಲಾಗಿದೆ. ಒಟ್ಟಾರೆಯಾಗಿ 60 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ರೈಲ್ವೆ ಇಲಾಖೆಯು ಇಂತಹ ಬೇಜವಾಬ್ದಾರಿ ಸಂಸ್ಥೆಗಳಿಗೆ ಕಠಿಣ ಸಂದೇಶ ರವಾನಿಸಿದೆ. ಪ್ರೀಮಿಯಂ ದರ ನೀಡಿ ಪ್ರಯಾಣಿಸುವ ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡುವುದು ಕಡ್ಡಾಯ ಎಂದು ಇಲಾಖೆ ಪುನರುಚ್ಚರಿಸಿದೆ.
