Ashwaveega news 24×7ಮಾರ್ಚ್ 27.2026:ಒಂದ್ಕಡೆ ಜಾಗತಿಕ ಯುದ್ಧದ ಆತಂಕ, ಮತ್ತೊಂದ್ಕಡೆ ಕಮರ್ಷಿಯಲ್ ಗ್ಯಾಸ್ ಕೊರತೆ. ಇದರ ನಡುವೆ ಈಗ ಪೆಟ್ರೋಲ್ ಹಾಗೂ ಡೀಸೆಲ್ ಲಭ್ಯತೆಯ ಬಗ್ಗೆ ಹೊಸ ಭೀತಿ ಎದುರಾಗಿದೆ. ಬೆಂಗಳೂರಿನ ಅನೇಕ ಭಾಗಗಳಲ್ಲಿ ಪೆಟ್ರೋಲ್ ಬಂಕ್ಗಳು ಬಂದ್ ಆಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ‘ನೋ ಸ್ಟಾಕ್’ ಬೋರ್ಡ್ಗಳನ್ನು ಹಾಕಿಕೊಂಡಿರುವ ಬಂಕ್ಗಳ ಬಳಿ ವಾಹನ ಸವಾರರು ನಿರಾಸೆಯಿಂದ ಹಿಂದಿರುಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಇತ್ತೀಚೆಗೆ ಹೋಟೆಲ್ಗಳು ಬಂದ್ ಆಗಿದ್ದ ಘಟನೆ ಚರ್ಚೆಯಾಗುತ್ತಿದ್ದಂತೆ, ಇದೀಗ ಸಿಲಿಕಾನ್ ಸಿಟಿಯಲ್ಲಿ ಪೆಟ್ರೋಲ್ ಬಂಕ್ಗಳೇ ಬಂದ್ ಆಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ. ಸುಮ್ಮನಹಳ್ಳಿ ಮತ್ತು ಕೆಂಗೇರಿ ಭಾಗಗಳಲ್ಲಿ ಅನೇಕ ಪೆಟ್ರೋಲ್ ಹಾಗೂ CNG ಬಂಕ್ಗಳು ಕಾರ್ಯನಿರ್ವಹಣೆ ನಿಲ್ಲಿಸಿದ್ದು, ದಿನನಿತ್ಯ ಪ್ರಯಾಣ ಮಾಡುವ ಜನರಿಗೆ ತೊಂದರೆ ಉಂಟಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಕೊರತೆಯೇ ಇದಕ್ಕೆ ಕಾರಣವೆಂದು ಮೊದಲಿಗೆ ಭಾವಿಸಲಾಯಿತು ಆದರೂ, ವಾಸ್ತವದಲ್ಲಿ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲವೆಂಬುದು ತಿಳಿದುಬಂದಿದೆ. ಸಮಸ್ಯೆಗೆ ಮೂಲ ಕಾರಣ ಆಯಿಲ್ ಕಂಪನಿಗಳು ಜಾರಿಗೆ ತಂದಿರುವ ಹೊಸ ನಿಯಮವಾಗಿದೆ. ಮೊದಲು ಪೆಟ್ರೋಲ್ ಬಂಕ್ಗಳಿಗೆ ಕ್ರೆಡಿಟ್ ಆಧಾರದ ಮೇಲೆ ಇಂಧನ ಸರಬರಾಜು ಮಾಡಲಾಗುತ್ತಿತ್ತು. ಬಂಕ್ಗಳು ನಂತರ ಹಣ ಪಾವತಿಸುವ ವ್ಯವಸ್ಥೆ ಇತ್ತು. ಆದರೆ ಇದೀಗ ಆ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ಇನ್ನು ಮುಂದೆ ಬಂಕ್ ಮಾಲೀಕರು ಆಡ್ವನ್ಸ್ ಪೇಮೆಂಟ್ ಪಾವತಿಸಿದ ಬಳಿಕ ಮಾತ್ರ ಇಂಧನವನ್ನು ಲೋಡ್ ರೂಪದಲ್ಲಿ ನೀಡಲಾಗುತ್ತಿದೆ. ಹಣ ಪಾವತಿಸದಿದ್ದರೆ ಸರಬರಾಜಿಲ್ಲ ಎಂಬ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದೆ. ಯುದ್ಧ ಪರಿಸ್ಥಿತಿಗೂ ಮುನ್ನ 60 ರಿಂದ 80 ಲಕ್ಷ ರೂಪಾಯಿವರೆಗೆ ಕ್ರೆಡಿಟ್ ಸೌಲಭ್ಯ ನೀಡಲಾಗುತ್ತಿತ್ತು. ಈಗ ಈ ವ್ಯವಸ್ಥೆ ಇಲ್ಲದಿರುವುದರಿಂದ ಅನೇಕ ಸಣ್ಣ ಬಂಕ್ಗಳು ತಕ್ಷಣ ಹಣ ಪಾವತಿಸಲು ಸಾಧ್ಯವಾಗದೇ ಬಂದ್ ಆಗಿರುವ ಪರಿಸ್ಥಿತಿ ಉಂಟಾಗಿದೆ.
