Ashwaveega News 24×7 ಮಾರ್ಚ್ 31 – 2026 : ದಾವಣಗೆರೆ ಬೈಎಲೆಕ್ಷನ್ ಅಖಾಡದಲ್ಲಿ ಕ್ಷಣಕ್ಷಣಕ್ಕೂ ಹೊಸ ಟ್ವಿಸ್ಟ್ಗಳು ಎದುರಾಗುತ್ತಿದ್ದು, ಇದೀಗ ಬಿಜೆಪಿಗೆ ಮತ್ತೊಂದು ಬಲ ಸಿಕ್ಕಿದೆ. ಸ್ವಾಭಿಮಾನಿ ಬಳಗದ ನಾಯಕ ವಿನಯ್ ಕುಮಾರ್ ಬಿಜೆಪಿ ಪರ ಬೆಂಬಲ ಘೋಷಣೆ ಮಾಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಶೀಘ್ರದಲ್ಲೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿರುವ ವಿನಯ್ ಕುಮಾರ್, ಈಗಾಗಲೇ ಮಾನಸಿಕವಾಗಿ ಬಿಜೆಪಿಯೊಂದಿಗೆ ನಿಂತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಚುನಾವಣೆಯಲ್ಲಿ ಸಾಂಘಿಕ ಹೋರಾಟ ಅಗತ್ಯ ಎಂದು ಹೇಳಿದ ಅವರು, ಈ ಬೈ ಎಲೆಕ್ಷನ್ನಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿರುವ ವಿನಯ್, ಪಾದಯಾತ್ರೆ ಮೂಲಕ ಜನರನ್ನು ಸಂಪರ್ಕಿಸುವ ತಂತ್ರ ರೂಪಿಸಿದ್ದಾರೆ. ಮೂರು ದಿನಗಳಲ್ಲಿ 34 ಹಳ್ಳಿಗಳನ್ನು ಸುತ್ತಿ ಮತಯಾಚನೆ ಮಾಡುವ ಯೋಜನೆಯನ್ನೂ ಘೋಷಿಸಿದ್ದಾರೆ.
“ನಾನು ಹಳ್ಳಿ-ಹಳ್ಳಿಗಳಲ್ಲಿ ಸುತ್ತಾಡಿ ಬಿಜೆಪಿ ಪರ ಕ್ಯಾಂಪೇನ್ ಮಾಡುತ್ತೇನೆ. ಶ್ರೀನಿವಾಸ್ ದಾಸಕರಿಯಪ್ಪ ಪರ ರಾಷ್ಟ್ರೀಯ ನಾಯಕರು ಸಹ ಪ್ರಚಾರಕ್ಕೆ ಬರುತ್ತಿದ್ದಾರೆ,” ಎಂದು ವಿನಯ್ ತಿಳಿಸಿದ್ದಾರೆ.
ಇದಲ್ಲದೆ, ಮೇ 4ರಂದು ನಡೆಯುವ ಫಲಿತಾಂಶದ ದಿನವೇ ತನ್ನ ಜನ್ಮದಿನವೂ ಇರುವುದಾಗಿ ಹೇಳಿದ ಅವರು, “ಬಿಜೆಪಿ ಗೆದ್ದ ಸುದ್ದಿ ಕೇಳಿದ ನಂತರವೇ ಕೇಕ್ ಕತ್ತರಿಸುತ್ತೇನೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಸ್ವಾಭಿಮಾನಿ ಬಳಗದ ವಿನಯ್ ನೀಡಿದ ಈ ಹೇಳಿಕೆ, ಬೈಎಲೆಕ್ಷನ್ ರಾಜಕೀಯ ಸಮೀಕರಣಗಳಿಗೆ ಹೊಸ ತಿರುವು ನೀಡಿದೆ.
