Ashwaveega News 24×7 ಮಾರ್ಚ್ 31 – 2026 : ಬೈಎಲೆಕ್ಷನ್ ಕಣ ದಿನದಿಂದ ದಿನಕ್ಕೆ ಕಾವೇರಿಸುತ್ತಿರುವ ನಡುವೆ, ಇದೀಗ ಶಾಸಕ ಬಸನಗೌಡ ಪಾಟೀಲ ಯತ್ನಾಳ್ಗೆ ಸಚಿವ ಎಂ.ಬಿ. ಪಾಟೀಲ್ ತೀವ್ರ ಸವಾಲ್ ಹಾಕಿದ್ದಾರೆ. “ಸ್ವಾಭಿಮಾನ, ಮರ್ಯಾದೆ ಇದ್ದರೆ ಬಿಜೆಪಿ ಸೋಲಿಸಲಿ” ಎಂದು ಎಂ.ಬಿ. ಪಾಟೀಲ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಕೇಳಿಬಂದಿದೆ .
ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿರುವ ಸಂದರ್ಭದಲ್ಲಿ, ಯತ್ನಾಳ್ ಯಾವ ರೀತಿಯ ನಿಲುವು ತಾಳುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ. ವಿಜಯೇಂದ್ರ ವಿರುದ್ಧ ಪದೇಪದೇ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್, ಈಗ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿಯುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇನ್ನೊಂದೆಡೆ, ಯತ್ನಾಳ್ ಈ ಪ್ರಚಾರದ ಮೂಲಕ ಮತ್ತೆ ಪಕ್ಷದಲ್ಲಿ ಸ್ಥಾನ ಪಡೆಯಲು ಒತ್ತಡ ತರುತ್ತಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. “ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದೇನೆ” ಎಂದು ಹೇಳಿಕೊಂಡು ಪಕ್ಷಕ್ಕೆ ಮರಳುವ ತಂತ್ರವೇ ಇದಾಗಿದೆಯೇ ಎಂಬ ಚರ್ಚೆಯೂ ಜೋರಾಗಿದೆ .
ಯತ್ನಾಳ್ ಮಾತೆತ್ತಿದರೆ ಸಾಕು ಬಿಎಸ್ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುವ ನಾಯಕನಾಗಿ ಪರಿಚಿತರಾಗಿರುವ ಹಿನ್ನೆಲೆ, ಈಗ ಅದೇ ಕುಟುಂಬದ ನೇತೃತ್ವದ ಬಿಜೆಪಿ ಪರವಾಗಿ ಅವರು ಹೇಗೆ ನಿಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಇದೇ ವೇಳೆ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ, ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಧಕ್ಕೆಯಾಗಬಹುದು ಎಂಬ ರಾಜಕೀಯ ಲೆಕ್ಕಾಚಾರವೂ ನಡೆಯುತ್ತಿದೆ. ಹೀಗಾಗಿ, ಈ ಚುನಾವಣೆ ಬಿಜೆಪಿ ಒಳರಾಜಕೀಯಕ್ಕೂ ಮಹತ್ವದ ಪರೀಕ್ಷೆಯಾಗಿದೆ.
ಒಟ್ಟಾರೆ, ಯತ್ನಾಳ್ರನ್ನು ಇಕ್ಕಟ್ಟಿಗೆ ಸಿಲುಕಿಸಲು ಎಂಬಿ ಪಾಟೀಲ್ ಹಾಕಿರುವ ಈ “ಸ್ವಾಭಿಮಾನ” ಸವಾಲ್ ರಾಜಕೀಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದ್ದು, ಯತ್ನಾಳ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದೇ ಮುಂದಿನ ಬೆಳವಣಿಗೆಗಳನ್ನು ನಿರ್ಧರಿಸಲಿದೆ.
