Ashwaveega News 24×7 ಏಪ್ರಿಲ್ 1 – 2026 : ದಿನೇ ದಿನೇ ರಂಗೇರುತ್ತಿರುವ ದಾವಣಗೆರೆ ಉಪಚುನಾವಣೆ ಇದೀಗ ಕುತೂಹಲದ ಕೇಂದ್ರಬಿಂದುವಾಗಿದೆ. ಚುನಾವಣೆಗೆ ಕೇವಲ 9 ದಿನಗಳು ಬಾಕಿ ಇರುವ ಈ ಹೊತ್ತಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನಾಯಕರು ಕ್ಷೇತ್ರದಲ್ಲಿ ಭಾರೀ ಪ್ರಚಾರ ನಡೆಸುತ್ತಿದ್ದಾರೆ .
ಆದರೆ, ಈ ರಾಜಕೀಯ ಗದ್ದಲದ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಗೈರುಹಾಜರಿ ಚರ್ಚೆಗೆ ಗ್ರಾಸವಾಗಿದೆ. ಇಷ್ಟರವರೆಗೆ ಕ್ಷೇತ್ರದಲ್ಲಿ ಅವರು ಕಾಣಿಸಿಕೊಳ್ಳದೇ ಇರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ವಿಶೇಷವಾಗಿ ಅಲ್ಪಸಂಖ್ಯಾತರ ಮತಬ್ಯಾಂಕ್ ಪ್ರಭಾವ ಹೆಚ್ಚಿರುವ ದಾವಣಗೆರೆಯಲ್ಲಿ, ಜಮೀರ್ ಅವರ ಪಾತ್ರ ಮಹತ್ವದ್ದೆಂದು ಪರಿಗಣಿಸಲಾಗುತ್ತದೆ .
ಇದರಿಂದಾಗಿ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳು ಕೇಳಿಬರುತ್ತಿವೆ. ಅಲ್ಪಸಂಖ್ಯಾತರ ಶಕ್ತಿ ಪ್ರದರ್ಶನಕ್ಕಾಗಿ ಜಮೀರ್ ಹೊಸ ತಂತ್ರ ರೂಪಿಸಿರುವರಾ? ಕ್ಷೇತ್ರಕ್ಕೆ ನೇರವಾಗಿ ಭೇಟಿ ನೀಡದೇ, ತಮ್ಮ ಪ್ರಭಾವವನ್ನು ತೋರಿಸಲು ಪ್ರಯತ್ನಿಸುತ್ತಿರುವರಾ ಎಂಬ ಪ್ರಶ್ನೆಗಳು ಎದ್ದಿವೆ .
ಇದಲ್ಲದೆ, ಮೌಲ್ವಿಗಳ ಮೂಲಕ ‘ನ್ಯೂಟ್ರಲ್’ ಸಂದೇಶ ರವಾನೆಯಾಗಿದೆಯೇ ಎಂಬ ಚರ್ಚೆಯೂ ಜೋರಾಗಿದೆ . ಹೈಕಮಾಂಡ್ ಗಮನ ಸೆಳೆಯಲು ಜಮೀರ್ ಅಹ್ಮದ್ ಖಾನ್ ಈ ರೀತಿಯ ತಂತ್ರವನ್ನು ಅನುಸರಿಸುತ್ತಿದ್ದಾರಾ? ಅಥವಾ ತಾವು ಪ್ರಚಾರಕ್ಕೆ ಬಾರದಿದ್ದರೆ ಅದರ ಪರಿಣಾಮ ಹೇಗಿರಬಹುದು ಎಂಬುದರ ‘ಸ್ಯಾಂಪಲ್’ ತೋರಿಸಲು ಮುಂದಾಗಿದ್ದಾರಾ ಎಂಬ ಪ್ರಶ್ನೆಗಳು ಇನ್ನಷ್ಟು ತೀವ್ರವಾಗುತ್ತಿವೆ .
ಒಟ್ಟಿನಲ್ಲಿ, ದಾವಣಗೆರೆ ಉಪಚುನಾವಣೆ ದಿನೇದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಗಳು ಇನ್ನಷ್ಟು ಕುತೂಹಲಕಾರಿ ಆಗುವ ಸಾಧ್ಯತೆ ಇದೆ .
