Ashwaveega News 24×7 ಏಪ್ರಿಲ್ 3 – 2026 : ಕಾಲ ಬದಲಾಗುತ್ತಿದ್ದಂತೆ ಆಟ ಆಡುವ ವಿಧಾನ ಬದಲಾಗಬಹುದು, ಆದರೆ ಆಟಗಾರನ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ ಎಂಬ ಸಂದೇಶವನ್ನು ಒಳಗೊಂಡು ‘ಲೂಪ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಲವ್ ಮತ್ತು ಸಸ್ಪೆನ್ಸ್ ಅಂಶಗಳನ್ನು ಹೊಂದಿರುವ ಈ ಸಿನಿಮಾ ಒಂದು ಆಟದ ಸುತ್ತ ಹೆಣೆಯಲ್ಪಟ್ಟಿದ್ದು, ಕುತೂಹಲಕಾರಿ ಕ್ಲೈಮ್ಯಾಕ್ಸ್ ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ.
‘ಸ್ಟಾಪ್ ಬೆಟ್ಟಿಂಗ್ಸ್’ ಮತ್ತು ‘ನೋ ಡ್ರಗ್ಸ್’ ಎಂಬ ಸಾಮಾಜಿಕ ಸಂದೇಶಗಳನ್ನು ಸಹ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮ ಜರುಗಿದ್ದು, ನಟ ಪ್ರಥಮ್ ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ಚಿತ್ರಕ್ಕೆ ಯಶವಂತ ನಿರ್ದೇಶನ ಮಾಡಿದ್ದು, ಎಸ್.ಕೆ.ಎಲ್ಲಪ್ಪ ಮತ್ತು ಯುವಿ ಪ್ರಮೋಷನ್ ಉಮೇಶ್ K N ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಶಶಿಕಿರಣ್ ನಾಯಕನಾಗಿ ಕಾಣಿಸಿಕೊಂಡಿದ್ದು, ಶೋಭಿತ ಅವರ ಜೊತೆ ಜೋಡಿಯಾಗಿ ನಟಿಸಿದ್ದಾರೆ. ಮಿಮಿಕ್ರಿ ಗೋಪಿ, ಅಪ್ಪುರಾಜ್, ಅಭಿ ಸಾಮ್ರಾಟ್, ಮಂಜುಳಾ ಅರಸ್, ಗಣೇಶ್ ಹಾಗೂ ಜೀವನ್ ಗೌಡ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಜೀವನ್ ಗೌಡ ಅವರ ಸಿನಿಮಾಟೋಗ್ರಫಿ, ಸಂತೋಷ್ ಜೋಶ್ವ ಸಂಗೀತ ಮತ್ತು ಅನಿಲ್ ಆಚಾರ್ ಅವರ ಸಂಕಲನ ಚಿತ್ರದ ರಸದೌತಣ ಹೆಚ್ಚಿಸಲಿದ್ದು, ಪ್ರಚಾರ ಕಾರ್ಯಗಳನ್ನು ಶ್ರೀಧರ್ ನೋಡಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ‘ಲೂಪ್’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ.
