Ashwaveega News 24×7 ಏಪ್ರಿಲ್ 6 – 2026 : ಬಾಗಲಕೋಟೆ : ಜಿಲ್ಲೆಯ ಕಮತಗಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರಚಾರ ಸಭೆಗಳಲ್ಲಿ ಭಾಗವಹಿಸುವವರಿಗೆ ₹200 ದಿನಗೂಲಿ ನೀಡಲಾಗುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವವರಿಗೆ ಹಣ ನೀಡುವ ಬಗ್ಗೆ ಹೇಳುತ್ತಿರುವ ದೃಶ್ಯಗಳು ಕಂಡುಬಂದಿವೆ. “ಪ್ರಚಾರ ಮುಗಿಸಿ ವಾಪಸ್ಸು ಬಂದ ಬಳಿಕ ನಮ್ಮ ವ್ಯಕ್ತಿಯ ಬಳಿ ಹೋಗಿ ₹200 ಪಡೆಯಿರಿ” ಎಂಬ ರೀತಿಯ ಹೇಳಿಕೆಗಳು ವಿಡಿಯೋದಲ್ಲಿ ಕೇಳಿಬರುತ್ತಿವೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, “ಕಾಂಗ್ರೆಸ್ ಪ್ರಚಾರಕ್ಕೆ ಕಾರ್ಯಕರ್ತರೇ ಇಲ್ಲವೇ?” ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಕೆಲವರು ಇದನ್ನು ಆಮಿಷ ಒಡ್ಡುವ ಕ್ರಮ ಎಂದು ಆರೋಪಿಸುತ್ತಿದ್ದು, ಮತ್ತೊಂದೆಡೆ ಪಕ್ಷದ ಕಾರ್ಯಚಟುವಟಿಕೆಗಳ ಭಾಗವೆಂದು ಕೆಲವರು ಸಮರ್ಥನೆ ನೀಡುತ್ತಿದ್ದಾರೆ .
ವೈರಲ್ ವಿಡಿಯೋದಲ್ಲಿ “ಕೈ” ಪಕ್ಷದ ಸ್ಥಳೀಯ ಮುಖಂಡ ರಾಮು ಅವರ ಹೆಸರು ಉಲ್ಲೇಖವಾಗಿದ್ದು, ಇದು ಇನ್ನಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆದರೆ ಈ ಕುರಿತು ಅಧಿಕೃತವಾಗಿ ಪಕ್ಷದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ .
ಮತದಾರರಿಗೆ ಆಮಿಷ ಒಡ್ಡಿದ ಆರೋಪದ ಕುರಿತು ಚುನಾವಣಾ ಆಯೋಗ ಅಥವಾ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಘಟನೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತಷ್ಟು ತೀವ್ರ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ .
